ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ದಕ್ಕದ ಪಡಿತರ: ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ- ಆರೋಪ

Update: 2019-09-16 17:14 GMT

ಮೂಡಿಗೆರೆ, ಸೆ.16: ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಬಡ ಪಡಿತರ ಚೀಟಿದಾರರು ಪಡಿತರಗಳನ್ನು ಪಡೆಯಲು ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ವರ್ ಸಮಸ್ಯೆ, ಇಂಟರ್‍ನೆಟ್ ಸಮಸ್ಯೆಗಳಿಂದಾಗಿ ಬಡವರು ನ್ಯಾಯಬೆಲೆ ಅಂಗಡಿಗಳ ಎದುರು ಪ್ರತಿದಿನ ಕಾದು ಕಾದು ಹೈರಾಣಾಗುವಂತಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕ್ಷೇತ್ರದ ಶಾಸಕರು, ಜನಪ್ರತಿನಿಧಗಳು ಕೂಡಲೇ ಈ ಸಮ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಕೆ.ರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 

ನ್ಯಾಯಬೆಲೆ ಅಂಗಡಿಗಳಲ್ಲಿ ಸರಕಾರ ಹೊಸ ಪಡಿತರ ವಿತರಣಾ ವ್ಯವಸ್ಥೆ ಜಾರಿ ಮಾಡಿದಾಗಿನಿಂದ ತಾಲೂಕಿನಾದ್ಯಂತ ಪಡಿತರ ಚೀಟಿದಾರರಿಗೆ ಸರಿಯಾಗಿ ಪಡಿತರಗಳು ಸಿಗುತ್ತಿಲ್ಲ. ಇಂಟರ್‍ನೆಟ್ ಸಮಸ್ಯೆಯಿಂದಾಗಿ ಈ ಹಿಂದೆ ಬಡಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಬೆಳಗಿನಿಂದ ಸಂಜೆವರೆಗೆ ಕಾದು ಬರಿಗೈಲಿ ಹಿಂದಿರುಗುವ ಪರಿಸ್ಥಿತಿ ಇತ್ತು. ಸದ್ಯ ಇಂಟರ್‍ನೆಟ್ ಸೌಲಭ್ಯ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಪಡೆಯುವ ಯಂತ್ರಕ್ಕೆ ಪಡಿತರ ಚೀಟಿದಾರರು ಬೆರಳಚ್ಚು ನೀಡಿದರೂ ಯಂತ್ರದಲ್ಲಿ ದಾಖಲಾಗುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರು ಸುಖಾಸುಮ್ಮನೆ ಕೆಲಸ ಕಾರ್ಯಬಿಟ್ಟು ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿದಿನ ಅಲೆಯಬೇಕಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತಾಲೂಕಿನ ಜನ್ನಾಪುರ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿರುವ ಯಂತ್ರದಲ್ಲಿ ಸೋಮವಾರ ಬೆರಳಚ್ಚು ದಾಖಲಾಗದೆ ನೂರಾರು ಮಂದಿ ಪಡಿತರ ಚೀಟಿದಾರರಿಗೆ ಪಡಿತರ ಸಿಕ್ಕಿಲ್ಲ. ಇದರಿಂದ ಬೇಸತ್ತ ಕೆಲ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಸಿಬ್ಬಂದಿಗೆ ಹಲ್ಲೆ ಮಾಡಲು ಮುಂದಾಗಿದ್ದಾರೆಂದು ದೂರಿರುವ ಅವರು, ಇಂತಹ ಸಮಸ್ಯೆಗಳು ಇಕೆವೈಸಿ ಪಡಿತರ ವ್ಯವಸ್ಥೆ ಜಾರಿಯಾದಾಗಿನಿಂದ ತಾಲೂಕಿನಲ್ಲಿ ಸರ್ವೆ ಸಾಮಾನ್ಯವಾಗಿದೆ. ಇಂತಹ ಸಮಸ್ಯೆಗಳಿಂದಾಗಿ ನ್ಯಾಯಬೆಲೆ ಅಂಗಡಿಗಳ ಅಕ್ಕಿ, ರಾಗಿ, ಸೀಮೆಎಣ್ಣೆಯಂತಹ ದಿನನಿತ್ಯದ ಅಗತ್ಯ ವಸ್ತಯಗಳನ್ನೇ ನಂಬಿಕೊಂಡು ಬದುಕುತ್ತಿರುವ ಬಡಕುಟುಂಬಗಳಿಗೆ ಭಾರೀ ಅನ್ಯಾಯವಾಗುತ್ತಿದೆ. ತಾಲೂಕಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನ್ಯಾಯಬೆಲೆ ಅಂಗಡಿಗಳಲ್ಲಿನ ಇಂತಹ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಸರಕಾರದ ಮೇಲೆ ಒತ್ತಡ ಹೇರಬೇಕು. ಬಡಜನರು ಪಡಿತರ ವಸ್ತುಗಳಿಂದ ವಂಚಿತರಾಗುವುದನ್ನು ತಡೆಯಬೇಕೆಂದು ಕೆ.ಕೆ.ರಾಮಯ್ಯ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News