ಬಿಜೆಪಿಯ ದ್ವೇಷದ ರಾಜಕಾರಣ ಸರಿಯಲ್ಲ: ಶಾಸಕ ಗೌರಿಶಂಕರ್

Update: 2019-09-16 17:29 GMT

ತುಮಕೂರು,ಸೆ.16: ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ಸಿ.ಎಂ ಬಿ.ಎಸ್.ಯಡಿಯೂರಪ್ಪ ಅವರು ಈಗ ದ್ವೇಷದ ರಾಜಕಾರಣ ಮಾಡುತ್ತಿದ್ದು, ಶಾಸಕರಿಗೆ ನೀಡಿದ್ದ ವಿಶೇಷ ಅನುದಾನವನ್ನು ಹಿಂಪಡೆಯಲು ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಸಿದ್ಧಗಂಗಾ ಮಠದಲ್ಲಿಂದು 42ನೇ ಹುಟ್ಟುಹಬ್ಬದ ಅಂಗವಾಗಿ ಸಿದ್ದಲಿಂಗಶ್ರೀ ಆರ್ಶೀವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಿಶಂಕರ್ ಅವರು, ಮುಖ್ಯಮಂತ್ರಿಗಳು ಸದನದಲ್ಲಿ ನಿಂತು ಎಲ್ಲ ಪಕ್ಷದವರನ್ನು ಸಮಾನವಾಗಿ ನೋಡಿಕೊಳ್ಳುತ್ತೇನೆ, ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದರು. ಆದರೆ ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ವಿಶೇಷ ಅನುದಾನವನ್ನು ಹಿಂಪಡೆಯಲು ಆದೇಶಿಸಿದ್ದಾರೆ ಎಂದರು.

ರಾಜ್ಯದಲ್ಲಿ ನೆರೆ ಇರುವುದರಿಂದ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರತಿ ವರ್ಷ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹುಟ್ಟುಹಬ್ಬದ ಅಂಗವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದರು. ನೆರೆ ಹಿನ್ನೆಲೆಯಲ್ಲಿ ಬೇಡ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದೆ. ಆದರೆ ಪ್ರತಿ ವರ್ಷದಂತೆ ಆಚರಿಸುವುದಾಗಿ ಹೇಳಿದರು. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಪ್ಪಿಕೊಂಡೆ ಎಂದು ತಿಳಿಸಿದರು.

ನೆರೆ ಸಂತ್ರಸ್ತರಿಗೆ ಈಗಾಗಲೇ 2 ಲಾರಿ ಲೋಡ್ ಅಕ್ಕಿಯನ್ನು ಕಳುಹಿಸಿದ್ದು, ಬೆಳ್ಳಾವಿ ಕಾರದ ಮಠದ ಸ್ವಾಮೀಜಿಗಳು ಹೆಚ್ಚಿನ ಹಾನಿಯಾಗಿರುವ ಗ್ರಾಮಗಳ ಪಟ್ಟಿಯನ್ನು ನೀಡಿದ್ದು, ಕಾರ್ಯಕರ್ತರೊಂದಿಗೆ ಕುಳಿತು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಪೋನ್ ಕದ್ದಾಲಿಕೆ ಸಂಬಂಧ ಕುಮಾರಸ್ವಾಮಿ ಅವರು ಸಿಬಿಐ ತನಿಖೆ ಅಲ್ಲದಿದ್ದರೆ ಬೇರೆ ಅಂತರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ, ಅದರ ಬಗ್ಗೆ ಮಾತನಾಡುವುದು ಅನಾವಶ್ಯಕ ಎಂದರು.

ಜೆಡಿಎಸ್ ಮತ್ತು ಕಾಂಗ್ರೆಸ್‍ನಿಂದ ಹೊರಹೋಗಬೇಕೆಂದಿರುವ ಮುಖಂಡರುಗಳು ಈಗ ಅನರ್ಹಗೊಂಡಿರುವ 17 ಶಾಸಕರನ್ನು ಗಮನಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದ ಅವರು, ಹೆಚ್‍ಡಿ ದೇವೇಗೌಡ ಅವರ ಕುಟುಂಬ ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತಿದ್ದು, ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಸುಮ್ಮನೆ ದೇವೇಗೌಡರ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುವುದು ಬೇಡ ಎಂದು ಹೇಳಿದರು.

ಚಲುವರಾಯಸ್ವಾಮಿ ಮಹಾನ್ ನಾಯಕರು, 2013ರ ಚುನಾವಣೆಯಲ್ಲಿ ನಾನು ಮತ್ತು ಚೆನ್ನಿಗಪ್ಪ ಅವರು ಸೋಲಲು ಚಲುವ ರಾಯಸ್ವಾಮಿ ಕಾರಣ, ಸೀಟು ಕೊಡಲು ಆಟವಾಡಿಸಿದ್ದರು. ಅವರಿಗೆ ಈಗ ಜಾಗವಿಲ್ಲದಂತಾಗಿದೆ. ಚಟ ತೀರಿಸಿಕೊಳ್ಳಲು ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದಾರೆ. ಸುಳ್ಳು ಹೇಳಿ ಟಿಕೆಟ್ ತಪ್ಪಿಸಲು ಯತ್ನಿಸಿದ್ದರು. 2013ರಲ್ಲಿ ನಾನು ಸೋಲಲು ಅವರೇ ಕಾರಣ. ಬಿಜೆಪಿ, ಕಾಂಗ್ರೆಸ್ ಬಗ್ಗೆ ಮಾತನಾಡದೇ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕರ ಬೆಂಬಲಿಗರಿಂದ ಗೂಂಡಾಗಿರಿ ಹೆಚ್ಚಿದೆ. ಇದರಿಂದಾಗಿ ಜನರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಅಮಾಯಕ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ. ಜನರ ದಬ್ಬಾಳಿಕೆ ಮಾಡದಂತೆ ಪೊಲೀಸರಿಗೆ ತಿಳಿಸಿದ್ದೇನೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಆಜಂ, ವೈ.ಟಿ,ನಾಗರಾಜು, ತಾಲೂಕು ಯುವಘಟಕದ ಅಧ್ಯಕ್ಷ ಸುವರ್ಣ ಗಿರಿಕುಮಾರ್, ಮಾಜಿ ಎಪಿಎಂಸಿ ಅಧ್ಯಕ್ಷ ನರುಗನಹಳ್ಳಿ ವಿಜಿಕುಮಾರ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಊರ್ಡಿಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ವಿಷ್ಣುವರ್ಧನ್, ಜೆಡಿಎಸ್ ಮುಖಂಡರಾದ ಗೂಳೂರು ಕೃಷ್ಣೇಗೌಡ, ಕಾಮೇಗೌಡ, ಹೊಸೂರು ಲಿಂಗರಾಜು, ರವಿ ಚಿಕ್ಕಸಾರಂಗಿ, ಗೂಳರಿವೆ ಚಂದ್ರು, ಗ್ರಾಮಪಂಚಾಯ್ತಿ ಸದಸ್ಯ ಶಿವರಾಜು, ಪ್ರಭಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಗೌರಕ್ಕ, ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಕಿರಣ್ ಹಾಗೂ ಇತರರು ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News