ತಂದೆ-ತಾಯಿಯನ್ನು ಬಿಟ್ಟರೆ ವಿದ್ಯೆ ನೀಡಿದ ಗುರುಗಳು ಹೆಚ್ಚು ನೆನಪಿನಲ್ಲಿದ್ದಾರೆ: ನ್ಯಾ.ಪಿ.ವಿಶ್ವನಾಥ ಶೆಟ್ಟಿ

Update: 2019-09-16 17:37 GMT

ಮಂಡ್ಯ, ಸೆ.16: ಗುರುಗಳು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲು ಪಟ್ಟಿರುವ ಶ್ರಮ ಅಪಾರವಾದುದು. ಅದರಿಂದಾಗಿಯೇ ಶಿಕ್ಷಕರನ್ನು ಗುರುದೇವೋಭವ ಎಂದು ಕರೆಯಲಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ. ತಂದೆ- ತಾಯಿಗಿಂತ ಹೆಚ್ಚಾಗಿ ಗುರುಗಳನ್ನು ಗೌರವಿಸುತ್ತೇವೆ. ನನ್ನ ಮನಸ್ಸಿನಲ್ಲಿಯೂ ತಂದೆ-ತಾಯಿಯನ್ನು ಬಿಟ್ಟರೆ ವಿದ್ಯೆ ನೀಡಿದ ಗುರುಗಳು ಹೆಚ್ಚು ನೆನಪಿನಲ್ಲಿದ್ದಾರೆ ಎಂದು ಅವರು ಸ್ಮರಿಸಿದರು.

ನಾನು ಸಹ ಕರಾವಳಿ ಪ್ರದೇಶದಿಂದ ಬಂದವನು. ಕರಾವಳಿ ಜನರು ವಾತಾವರಣಕ್ಕೆ ಹೊಂದಿಕೊಂಡಿರುತ್ತಾರೆ. ತಮ್ಮ ಹಳ್ಳಿ, ಊರು ಬಿಟ್ಟು, ಹೊರ ಪ್ರದೇಶಕ್ಕೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಪ್ರೀತಿ ವಿಶ್ವಾಸದಿಂದ ಬಾಳುತ್ತಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕರಾವಳಿಯ ಜನ ಸಾಧನೆ, ಯಶಸ್ಸಿಗೆ ಹೆಸರಾದವರು. ಅವರು ಎಲ್ಲಿ ಬೇಕಾದರೂ ಸಲ್ಲುವವರು ಎನ್ನುತ್ತಾರೆ. ಅಂತೆಯೇ ಜಿಲ್ಲೆಯ ಕರಾವಳಿ ಜನತೆ ಬಹಳ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಮಾರಗೌಡನಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಬಿ.ಎಸ್.ವಿನಯ್‍ಕುಮಾರ್, ನಗರದ ಹಾಲಹಳ್ಳಿ ಬಾಲಕಿಯರ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕ ಎಸ್.ಶಂಕರನಾರಾಯಣಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಕರದಳ್ಳಿ, ಕರಾವಳಿ ಒಕ್ಕೂಟದ ಅಧ್ಯಕ್ಷ ಡಾ.ಎಸ್.ಶ್ರೀನಿವಾಸ ಶೆಟ್ಟಿ, ಗೌರವಾಧ್ಯಕ್ಷ ಡಾ.ಜಗನ್ನಾಥ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ.ಪ್ರದೀಪಕುಮಾರ ಹೆಬ್ರಿ, ಮಂಜುನಾಥ ಹೆಗ್ಡೆ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News