ಯಾವ ಧರ್ಮವನ್ನೂ ಒಡೆಯದ ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಯಿತು: ಸಿದ್ದರಾಮಯ್ಯ

Update: 2019-09-16 18:04 GMT

ಚಾಮರಾಜನಗರ,ಸೆ.16: ನಾನೇನು ಲಿಂಗಾಯತ ಧರ್ಮ ಹುಟ್ಟು ಹಾಕಿಲ್ಲ. 850 ವರ್ಷಗಳ ಹಿಂದೆಯೇ ಜಗಜ್ಯೋತಿ ಬಸವಣ್ಣ ಅವರು ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಕೊಳ್ಳೇಗಾಲ ಪಟ್ಟಣದ ಹಳೇ ಕುರುಬರ ಬೀದಿಯಲ್ಲಿ ಸೋಮವಾರ 1 ಕೋಟಿ ವೆಚ್ಚದ ಶ್ರೀ ಬಿರೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಯಾವ ಧರ್ಮವನ್ನು ಒಡೆಯದ ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಯಿತು. ಲಿಂಗಾಯತ ಧರ್ಮವನ್ನು ನಾನೇನು ಹುಟ್ಟು ಹಾಕಿಲ್ಲ. ಬಸವಣ್ಣ ಸ್ಥಾಪಿಸಿದ ಧರ್ಮಕ್ಕೆ ಮಾನ್ಯತೆ ನೀಡಿ ಎಂದ ಕೆಲವರು, ನನ್ನ ವಿರುದ್ಧ ಅಪಪ್ರಚಾರ ಶುರುವಾದಾಗ ಬೆನ್ನಿಗೆ ನಿಲ್ಲಲ್ಲಿಲ್ಲ. ಈ ವಿಚಾರದಲ್ಲಿ ವಿರೋಧಿಗಳು ಹೆಚ್ಚಾಗಿ ಮೇಲುಗೈ ಸಾಧಿಸಿ ಮತ್ತೊಮ್ಮೆ ತನ್ನ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಾರದಂತೆ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು .

ಸಿದ್ದರಾಮಯ್ಯ ಕೇವಲ ಅಹಿಂದ ವರ್ಗದವರಿಗೆ ಕೆಲಸ ಮಾಡಿಕೊಡುತ್ತಾರೆ ಎಂದು ತಾವು ಸಿಎಂ ಆಗಿದ್ದಾಗ ಮತ್ತೊಂದು ಅಪಪ್ರಚಾರ ಮಾಡಿದರು. ಆದರೆ ತಾವು ರಾಜ್ಯದ 4 ಕೋಟಿ ಜನರಿಗೆ ತಲಾ 7 ಕೆಜಿ ಅಕ್ಕಿಯನ್ನು ಉಚಿತವಾಗಿ ಅನ್ನಭಾಗ್ಯ ಯೋಜನೆಯಡಿ ನೀಡಿದೆ. ಕ್ಷೀರಭಾಗ್ಯ, ಶಾಲಾ ಮಕ್ಕಳಿಗೆ ಬಿಸಿಯೂಟ, ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ , 50 ಸಾವಿರ ಸಾಲ ಮನ್ನಾ, ಇಂದಿರಾ ಕ್ಯಾಂಟಿನ್ ಸೌಲಭ್ಯಗಳನ್ನೆಲ್ಲ ನನ್ನ ಅಧಿಕಾರವಧಿಯಲ್ಲಿ ನೀಡಿದ್ದೇನೆ. ಇವೆಲ್ಲ ಅಹಿಂದ ವರ್ಗ ಬಿಟ್ಟು ಬೇರೆ ಸಮುದಾಯದವರಿಗೆ ಮುಟ್ಟಲಿಲ್ಲವೇ ಎಂದು ಪ್ರಶ್ನಿಸಿದರು .

ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ನಂದಗಡ ಸ್ಥಳವನ್ನು 400 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಿದ್ದೇನೆ. ಕನಕದಾಸರಿದ್ದ ಕಾಗಿನೆಲೆ ಅಭಿವೃದ್ಧಿಗೆ ಹಣ ನೀಡಲಾಗಿದೆ. ಆದರೆ, ನಮ್ಮ ಸಮುದಾಯದವರೊಬ್ಬರು ಬಾಯ್ತೆರೆದರೆ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಎನ್ನುತ್ತಾರೆ. ಆದರೆ ಏನನ್ನೂ ಮಾಡಿಲ್ಲ. ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಹಿಂದುಳಿದವರಿಗೆ ಬಿಜೆಪಿ ಟಿಕೇಟ್ ನೀಡಿಲ್ಲ. ಆದರೂ, ನರೇಂದ್ರ ಮೋದಿಗೆ ವೋಟ್ ಹಾಕಿ ಎಂದು ಬೊಬ್ಬೆ ಹೊಡೆದರು. ಇದೆಲ್ಲದರ ಬಗ್ಗೆ ನಮ್ಮ ಜನರು ಜಾಗೃತಿ ಹೊಂದಬೇಕು. ಪ್ರಸಕ್ತ ರಾಜಕೀಯದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಾದ ಶಕ್ತಿ ತಳವರ್ಗಕ್ಕೆ ಇರಬೇಕು ಎಂದು ಹೇಳಿದರು .

ಸಿದ್ದರಾಮಯ್ಯ ಮತ್ತೊಂದು ಬಾರಿ ಸಿಎಂ ಆಗಲಿ: ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ನಾನು 3 ಬಾರಿ ಶಾಸಕನಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ಅಲ್ಲದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂತ್ರಿಯನ್ನಾಗಿಯೂ ಮಾಡಿದರು. ನನಗೆ ಸದಾ ಮುಖ್ಯಮಂತ್ರಿ ಅವರೆ. ಮತ್ತೊಂದು ಬಾರಿ ಸಿದ್ದರಾಮಯ್ಯ ಸಿಎಂ ಆಗಿ ರಾಜ್ಯದ ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂಬುದು ನನ್ನ ಆಸೆ ಎಂದರು.

ಮೂಡನಂಬಿಕೆ ಹೋಗಲಾಡಿಸಿದರು: ಮಾಜಿ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ರಾಜ್ಯ ಕಂಡ ಮುಖ್ಯಮಂತ್ರಿಗಳ ಪೈಕಿ ದೇವರಾಜು ಅರಸ್ ಮತ್ತು ಸಿದ್ದರಾಮಯ್ಯ ಅವರು 5 ವರ್ಷ ಪೂರ್ಣಗೊಳಿಸಿದರು. ಹಿಂದುಳಿದ ಚಾಮರಾಜನಗರ ಜಿಲ್ಲೆಗೆ ಸಿಎಂ ಆಗಿದ್ದಾಗಲೇ 12 ಬಾರಿ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂಬ ಮೂಡನಂಬಿಕೆ ಹೋಗಲಾಡಿಸಿದರು ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಶಾಸಕ ಆರ್.ನರೇಂದ್ರ ಅವರು ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಜಯಣ್ಣ , ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು, ಸೋಮಶೇಖರ್, ಜಿ.ಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಮಾಜಿ ಉಪಾಧ್ಯಕ್ಷ ಯೋಗೀಶ್, ತಾಪಂ ಅಧ್ಯಕ್ಷ ರಾಜೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ನಗರಸಭಾ ಸದಸ್ಯೆ ಗಂಗಮ್ಮ ವರದರಾಜ್, ಶ್ರೀ ಬೀರೇಶ್ವರ ಟ್ರಸ್ಟ್ ಅಧ್ಯಕ್ಷ ಶಿವಮಲ್ಲು, ಕುರುಬರ ಸಂಘದ ಅಧ್ಯಕ್ಷ ರಾಚೇಗೌಡ, ಉಪಾಧ್ಯಕ್ಷ ನಂಜೇಗೌಡ ಸೇರಿ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News