ಶಿವಮೊಗ್ಗದಲ್ಲಿ ಹೊರವರ್ತುಲ ರಸ್ತೆ: ಕಾಲಮಿತಿಯಲ್ಲಿ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಕ್ಕೆ ಸಿಎಂ ಸೂಚನೆ

Update: 2019-09-16 18:07 GMT

ಶಿವಮೊಗ್ಗ, ಸೆ. 16: ಗುಜರಾತ್‍ನ ಅಹಮದಬಾದ್ ಮಾದರಿಯಲ್ಲಿ, ಶಿವಮೊಗ್ಗ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 200 ಅಡಿ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಕಾಲಮಿತಿಯಲ್ಲಿ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ದಿ ಯೋಜನೆಗಳ ಕುರಿತಂತೆ, ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ 200 ಅಡಿ ಹೊರವರ್ತುಲ ಯೋಜನೆಯ ಕುರಿತಂತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. 200 ಅಡಿ ವರ್ತುಲ ರಸ್ತೆ ನಿರ್ಮಾಣಕ್ಕೆ ಈಗಾಗಲೇ, ಎನ್‍ಹೆಚ್‍ಎಐ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗವು ಪ್ರತ್ಯೇಕವಾಗಿ ಭೂ ಸ್ವಾದೀನ ಮತ್ತು ಮಾರ್ಗ ಹಾದು ಹೋಗುವ ಸ್ಥಳಗಳ ಸರ್ವೇ ನಡೆಸುತ್ತಿವೆ. ರೈಲ್ವೆ ಇಲಾಖೆಗೆ ಸೇರಿದ ಜಾಗದ ಭೂ ಸ್ವಾದೀನದ ಸಮಸ್ಯೆ ಎದುರಾಗಿತ್ತು. ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. 

'ಕಾಲಮಿತಿಯಲ್ಲಿ ಭೂ ಸ್ವಾದೀನ ಹಾಗೂ ಇತರೆ ಪ್ರಕ್ರಿಯೆ ಪೂರ್ಣಗೊಳಿಸಿ, ಮಾರ್ಗ ನಿರ್ಮಾಣ ಕಾರ್ಯ ಆರಂಭಿಸಬೇಕು. ಮಾರ್ಗ ನಿರ್ಮಾಣಕ್ಕೆ ರಾಜ್ಯದಿಂದ ಲಭ್ಯವಾಗಬೇಕಾದ ಎಲ್ಲ ರೀತಿಯ ಸಹಕಾರ ಕಲ್ಪಿಸಲಾಗುವುದು' ಎಂದು ಸಿಎಂ ತಿಳಿಸಿದ್ದಾರೆ. 

ನೆಟ್‍ವರ್ಕ್ ಸಮಸ್ಯೆ: ಸಭೆಯಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, 'ಮಲೆನಾಡು ಭಾಗದಲ್ಲಿ ಮೊಬೈಲ್ ಹಾಗೂ ಅಂತರ್ಜಾಲ ಸಂಪರ್ಕ ಅಲಭ್ಯತೆಯ ಸಮಸ್ಯೆಯಿದೆ' ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ, ನೆಟ್‍ವರ್ಕ್ ಸಮಸ್ಯೆ ಪರಿಹಾರಕ್ಕೆ ಮಲೆನಾಡು ಭಾಗದಲ್ಲಿ ಖಾಸಗಿ ಕಂಪನಿಗಳ ಜೊತೆಗೂಡಿ ಹೆಚ್ಚಿನ ಟವರ್ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಯಿತು. 

ಸಭೆಯಲ್ಲಿ ಹಾಜರಿದ್ದ ಖಾಸಗಿ ಟೆಲಿಕಾಮ್ ಕಂಪನಿಗಳಿಗೆ, ಮಲೆನಾಡು ಭಾಗದಲ್ಲಿ ಯಾವುದೇ ರೀತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ತಲೆದೋರದಂತೆ ಟವರ್ ಅಳವಡಿಸುವಂತೆ ಮತ್ತು ಇದಕ್ಕೆ ಅಗತ್ಯವಾದ ನೆರವು ಕಲ್ಪಿಸಲಾಗುವುದು ಎಂದು ಭರವಸೆ ನೀಡಲಾಯಿತು. 

ಹೆದ್ದಾರಿ: ತುಮಕೂರು-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206 ನ್ನು ಚುತಷ್ಟಥ ಹೆದ್ದಾರಿಯಾಗಿ ಪರಿವರ್ತಿಸುವ ಕಾರ್ಯ ವಿಳಂಬವಾಗುತ್ತಿರುವುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ವಿಳಂಬಕ್ಕೆ ಕಾರಣವಾಗಿದ್ದ ತುಮಕೂರು ಪಟ್ಟಣದ ಭೂ ಸ್ವಾದೀನ ಪ್ರಕ್ರಿಯೆಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸಲಾಯಿತು. 

ಹಾಗೆಯೇ ಹೈವೆಯಲ್ಲಿ ಹಾದು ಹೋಗುವ ಜಾಗದಲ್ಲಿರೋ ಕರೆಗಳ ಹೂಳೆತ್ತಿ, ಅದರ ಮಣ್ಣನ್ನು ರಸ್ತೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಯಿತು. ನಿರ್ಮಾಣ ಕಾಮಗಾರಿ ತ್ವರಿತವಾಗಿ ಮುಗಿಸಲು, ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿ ಹಲವರಿದ್ದರು.

ಸಿಗಂದೂರು ಸೇತುವೆ ಕಾಮಗಾರಿಗೆ ಆರಂಭಿಸಿ'
ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಸೇತುವೆ ನಿರ್ಮಣ ಕಾರ್ಯ ಆರಂಭಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಒಟ್ಟಾರೆ 2.4 ಕಿಲೋ ಮೀಟರ್ ಉದ್ದದ ಈ ಸೇತುವೆಯನ್ನು, ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಿಸಬೇಕು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಕೆಲಸ ಆರಂಭಿಸುವಂತೆ ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಸಿಎಂ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News