ಸೊರಬ: 17 ನೇ ಶತಮಾನದ ನಂದಿಕಲ್ಲು ಶಾಸನ ಪತ್ತೆ

Update: 2019-09-16 18:15 GMT

ಶಿವಮೊಗ್ಗ, ಸೆ. 16: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿ ನೇರಲಗಿ ಗ್ರಾಮದ ಬಯಲು ಬಸವೇಶ್ವರ ದೇವಾಲಯ ಸಮೀಪ ಕ್ರಿ.ಶ. 17-18 ನೇ ಶತಮಾನದ ನಂದಿಕಲ್ಲು ಶಾಸನ ಪತ್ತೆಯಾಗಿದೆ. 

ರಾಜ್ಯ ಪುರಾತತ್ವ ಇಲಾಖೆಯ, ಶಿವಮೊಗ್ಗದ ಶಿವಪ್ಪನಾಯಕ ಅರಮನೆಯ ಸಹಾಯಕ ನಿರ್ದೇಶಕ ಶೇಜೇಶ್ವರರವರು ಈ ಶಾಸನವನ್ನು ಪತ್ತೆ ಮಾಡಿ, ಸಂರಕ್ಷಿಸಿದ್ದಾರೆ. 

ಈ ಶಾಸನವು ಒಂದು ಮೀಟರ್ ಎತ್ತರ, ಮೂವತ್ತು ಸೆಂಟಿ ಮೀಟರ್ ಅಗಲವಿದೆ. ಚೌಕಾಕಾರದಲ್ಲಿದೆ. ಮೇಲ್ಭಾಗದಲ್ಲಿ ನಂದಿಯಿಂದ ಅಲಂಕೃತಗೊಂಡಿದ್ದು, ಮಧ್ಯ ಭಾಗದಲ್ಲಿ ಕನ್ನಡ ಭಾಷೆಯ ಕೆತ್ತೆನೆಯಿರುವ ಆರು ಸಾಲುಗಳಿವೆ. 

'ಈ ಶಾಸನವು 17-18 ನೇ ಶತಮಾನದ್ದಾಗಿದೆ. ನೇರಲಗಿ ಗ್ರಾಮದ ವೀರಭದ್ರ ದೇವಾಲಯದ ಅಮೃತಪಡಿಗೆ ಬಸವಕಲ್ಲಿನ ಹತ್ತಿರವಿರುವ ಬಸವನ ಹೊಲವನ್ನು ದಾನ ನೀಡಿದ್ದಾರೆ. ಹಾಗೆಯೇ ನೇರಲಗಿ ಗ್ರಾಮದ ವೀರಭದ್ರ ದೇವಾಲಯದ ಹತ್ತಿರ ಬಿದ್ದಿರುವ ಗಜಲಕ್ಷ್ಮೀಯಲ್ಲಿ ಹೊಯ್ಸಳರ ಕಾಲದ ಶಾಸನವಿದೆ. ಈ ಗಜಲಕ್ಷ್ಮೀಯನ್ನು ಬಾರಂಗಿಯ ಗ್ರಾಮದವರು ದಾನ ನೀಡಿದರು ಎಂದು ತಿಳಿಸುತ್ತಾ ಸರಬ ಎಂಬ ಕಾಲ್ಪನಿಕ ಪ್ರಾಣಿಯನ್ನು ಹಾಗೂ ಮಕರ (ಮೊಸಳೆ) ಯ ಉಲ್ಲೇಖವಿದೆ' ಎಂದು ಪುರಾತತ್ವ ಅಧಿಕಾರಿ ಶೇಜೇಶ್ವರ್ ರವರು ಮಾಹಿತಿ ನೀಡಿದ್ದಾರೆ. 

ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಗ್ರಾಮಸ್ಥರಾದ ಸುರೇಶ ಹಾಗೂ ಶಾಸನ ಓದುವಲ್ಲಿ ಸಹಕರಿಸಿದ ಡಾ. ಜಗದೀಶ್‍ರವರಿಗೆ ಅಭಿನಂದಿಸುವುದಾಗಿ ಶೇಜೇಶ್ವರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News