ಟ್ರಕ್ಕಿಂಗ್ ತೆರಳಿ ಪುಷ್ಪಗಿರಿಯಲ್ಲಿ ನಾಪತ್ತೆಯಾಗಿದ್ದ ಯುವಕ ಸುಬ್ರಮಣ್ಯದಲ್ಲಿ ಪತ್ತೆ

Update: 2019-09-17 14:42 GMT

ಮಡಿಕೇರಿ ಸೆ.17: ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಹಾಗೂ ಕುಮಾರಪರ್ವತದಿಂದ ಟ್ರಕ್ಕಿಂಗ್ ಮುಗಿಸಿ ವಾಪಾಸಾಗುತ್ತಿದ್ದ ಸಂದರ್ಭ ಸುಬ್ರಮಣ್ಯ ಮೀಸಲು ಅರಣ್ಯದಲ್ಲಿ ಭಾನುವಾರ ಸಂಜೆ ನಾಪತ್ತೆಯಾಗಿದ್ದ ಯುವಕ ಮಂಗಳವಾರ ಬೆಳಗ್ಗೆ ಸುಬ್ರಮಣ್ಯ ಸಮೀಪದ ಕಲ್ಲುಗುಡ್ಡ ಎಂಬಲ್ಲಿ ಪತ್ತೆಯಾಗಿದ್ದಾರೆ.

ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಮೂರ್ತಿ, ವೀಣಾ ದಂಪತಿಗಳ ಪುತ್ರ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಸಂತೋಷ್(25) ಭಾನುವಾರ ನಾಪತ್ತೆಯಾಗಿದ್ದರು. ಬೆಂಗಳೂರಿನಿಂದ 12 ಮಂದಿ ಪುಷ್ಪಗಿರಿಗೆ ಟ್ರಕ್ಕಿಂಗ್‍ಗೆಂದು ಬಂದಿದ್ದ ಸಂದರ್ಭ ಸುಬ್ರಮಣ್ಯ ಮೀಸಲು ಅರಣ್ಯದಲ್ಲಿ ಸಂತೋಷ್ ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದಾರೆ ಎನ್ನಲಾಗಿದೆ.

ಕಾಡಿನೊಳಗೆ ರಕ್ತಹೀರುವ ಜಿಗಣೆಗಳಿಂದ ಕಚ್ಚಿಸಿಕೊಂಡು, ಎರಡು ರಾತ್ರಿಯನ್ನು ಬಂಡೆಗಳ ಮೇಲೆ ಕಳೆದು, ಅರಣ್ಯದೊಳಗೆ ಹರಿಯುವ ನೀರನ್ನು ಕುಡಿದು ಜೀವಂತವಾಗಿ ಹಿಂದಿರುಗಿದ್ದಾರೆ. 

ಕಾಡಿನೊಳಗಿಂದ ಸುಬ್ರಮಣ್ಯ ದೇವಾಲಯಕ್ಕೆ ನೈಸರ್ಗಿಕ ನೀರು ಸರಬರಾಜಾಗುವ ಪೈಪ್‍ನ್ನು ಕಂಡ ಸಂತೋಷ್ ಪೈಪ್‍ಲೈನ್‍ನನ್ನೇ ದಾರಿ ಸೂಚಕವಾಗಿ ಬಳಸಿ ಮಂಗಳವಾರ ಬೆಳಗ್ಗಿನ ಜಾವ ಕಲ್ಲುಗುಡ್ಡ ಎಂಬ ಸ್ಥಳದಲ್ಲಿದ್ದ ಒಂಟಿ ಮನೆಗೆ ತಲುಪಿದ್ದಾರೆ. ನಂತರ ಸುಬ್ರಮಣ್ಯ ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು 12.30ಕ್ಕೆ ಸುಬ್ರಮಣ್ಯಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಸಂತೋಷ್ ನಾಪತ್ತೆಯಾಗಿರುವ ಬಗ್ಗೆ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿಗಳಿಗೆ ಭಾನುವಾರ ಸಂಜೆ 7ಗಂಟೆಗೆ ಮಾಹಿತಿ ಲಭಿಸಿತ್ತು. ಸೋಮವಾರ ತಡರಾತ್ರಿಯವರೆಗೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಪುತ್ತೂರು ವಲಯದ ಡಿವೈಎಸ್‍ಪಿ ದಿನಕರ್ ಶೆಟ್ಟಿ, ಪುಷ್ಪಗಿರಿ ವನ್ಯಜೀವಿ ವಿಭಾಗದ ಎ.ಸಿ.ಎಫ್., ದಯಾನಂದ್, ಡಿ.ಆರ್.ಎಫ್,ಓ., ಶಶಿ, ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News