ಔರಾದ್ಕರ್ ವರದಿ ಜಾರಿ ವಿಳಂಬ: ಪೊಲೀಸ್ ಸಿಬ್ಬಂದಿಗಳಿಗೆ ಮತ್ತೆ ನಿರಾಸೆ

Update: 2019-09-17 15:42 GMT

ಬೆಂಗಳೂರು, ಸೆ.17: ಪೊಲೀಸ್ ಸಿಬ್ಬಂದಿಗಳ ವೇತನ ಹಾಗೂ ಇತರ ಭತ್ತೆಗಳ ಪರಿಷ್ಕರಣೆ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಜಾರಿಗೆ ತರಲು ರಾಜ್ಯ ಬಿಜೆಪಿ ಸರಕಾರ ಮತ್ತೆ ವಿಳಂಬ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ.

ನಾಡಹಬ್ಬ ದಸರಾ ವೇಳೆಗೆ ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸರಕಾರ ಉಡುಗೊರೆ ನೀಡುತ್ತಿದ್ದು, ಆಗಸ್ಟ್ 1ರಿಂದ ಅನ್ವಯವಾಗುವಂತೆ ಔರಾದ್ಕರ್ ಸಮಿತಿಯ ಪರಿಷ್ಕೃತ ವರದಿ ಜಾರಿಗೆ ಬರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ತಿಳಿಸಿದ್ದರು.

ಆದರೆ, ಎಡಿಜಿಪಿ(ಆಡಳಿತ) ಡಾ.ಎಂ.ಎ.ಸಲೀಂ ಸೆ.17ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ಆ.20ರಂದು ಸರಕಾರದ ಆದೇಶದಲ್ಲಿ ನಿಗದಿಪಡಿಸಲಾದಂತೆ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ವೇತನ ಪರಿಷ್ಕರಿಸಿ ವೇತನಕ್ಕೆ ಸೇರ್ಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ವೇತನ ಪರಿಷ್ಕರಣೆ ಕುರಿತಂತೆ ಸರಕಾರದಿಂದ/ಪೊಲೀಸ್ ಪ್ರಧಾನ ಕಚೇರಿಯಿಂದ ಆದೇಶ ನೀಡುವವರೆಗೂ ವೇತನ ನಿಗದಿಪಡಿಸುವ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಂತೆ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ವೇತನ ಪರಿಷ್ಕರಣೆಗಾಗಿ ಸರಕಾರದ ಮುಂದೆ ವಾದ ಮಂಡಿಸುತ್ತಿದ್ದ, ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಮತ್ತೆ ನಿರಾಸೆಯ ಕಾರ್ಮೋಡ ಆವರಿಸಿಕೊಂಡಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News