ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸಿಕ್ಕ ಅವಕಾಶ ಬಳಸುವೆ: ಲಕ್ಷ್ಮಣ ಸವದಿ

Update: 2019-09-17 15:54 GMT

ಬಳ್ಳಾರಿ, ಸೆ.17: ಬಳ್ಳಾರಿ ಭಾಗದಲ್ಲಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಅವಕಾಶವೊಂದು ಲಭಿಸಿದ್ದು, ಅದನ್ನು ಸಮರ್ಪಕವಾಗಿ ನಿಭಾಯಿಸುವೆ. ಈ ಮೂಲಕ ಇಲ್ಲಿನ ಜನರ ಪ್ರೀತಿ ವಿಶ್ವಾಸಗಳಿಸಲು ಯತ್ನಿಸುವುದಾಗಿ ಉಪಮುಖ್ಯಮಂತ್ರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿರುವ ಗೋಶಾಲೆಗಳನ್ನು ಬಂದ್ ಮಾಡುವುದಿಲ್ಲ. ಅವುಗಳನ್ನು ಮುಂದುವರೆಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಮೋಟರ್ ವಾಹನ ಕಾಯ್ದೆ(ತಿದ್ದುಪಡಿ) ಅನ್ವಯ ನಿಯಮ ಉಲ್ಲಂಘಿಸಿದವರಿಗೆ ವಿಧಿಸಲಾಗುವ ದಂಡಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ದಂಡಗಳನ್ನು ನಾಳೆ(ಬುಧವಾರ) ಸಂಜೆಯೊಳಗೆ ಅಂತಿಮಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಜೀವನದಲ್ಲಿ ನಾನು ಯಾವುದನ್ನು ನಿರೀಕ್ಷೆ ಮಾಡಿರಲಿಲ್ಲ. ರಾಜಕಾರಣಕ್ಕೆ ಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಶಾಸಕನಾದೆ, ಸಚಿವನಾದೆ, ಅಲ್ಪಮತಗಳ ಅಂತರದಿಂದ ಸೋಲನುಭವಿಸಿದರೂ ಪಕ್ಷ ನನಗೆ ಸಚಿವಗಿರಿ ನೀಡುವುದರ ಜತೆಗೆ ಉಪಮುಖ್ಯಮಂತ್ರಿ ಜವಾಬ್ದಾರಿ ನೀಡಿದೆ. ಇದರ ಜತೆಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನಾಗಿಯೂ ನೇಮಿಸಿದೆ ಎಂದು ಅವರು ಹೇಳಿದರು.

ಭಗವಂತ ನನ್ನ ಹಣೆಬರಹದಲ್ಲಿ ಏನು ಬರೆದಿದ್ದಾನೋ ಅದು ಆಗುತ್ತದೆ. ಅದನ್ನು ತಡೆಯುವುದಕ್ಕೆ ಯಾರಿಂದಲೂ ಆಗುವುದಿಲ್ಲ. ಆಯಾ ಜಿಲ್ಲೆಯವರಿಗೆ ಅದೇ ಜಿಲ್ಲೆಯ ಉಸ್ತುವಾರಿ ಬದಲಿಗೆ ಬೇರೆ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸುವುದು 15 ವರ್ಷಗಳ ಹಿಂದೆಯೇ ನಮ್ಮ ಪಕ್ಷದ ವರಿಷ್ಠರು ಗುಜರಾತಿನಲ್ಲಿ ಪ್ರಯೋಗ ಮಾಡಿದ್ದರು. ಅದರಂತೆ ನಮ್ಮಲ್ಲಿಯೂ ಆಗಿದೆ ಅಷ್ಟೇ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ನಾನು ಮತ್ತು ಶ್ರೀರಾಮುಲು ‘ರಾಮ-ಲಕ್ಷಣ’ರ ತರಹ ಸಹೋದರರಿದ್ದಂತೆ ಅಣ್ಣ ಬೇರೆ ಕಡೆ ಹೋಗಿದ್ದಾನೆ, ತಮ್ಮ ಈ ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ ಅಷ್ಟೇ. ಶ್ರೀರಾಮುಲು ಜೊತೆ ಈಗಾಗಲೇ ಮಾತನಾಡಿದ್ದೇನೆ ಎಂದು ಲಕ್ಷಣ ಸವದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News