ದಲಿತ ಸಂಸದರಿಗೆ ಗ್ರಾಮಕ್ಕೆ ಪ್ರವೇಶ ನಿರಾಕರಣೆ: ಆರೋಪಿಗಳ ಗಡಿಪಾರಿಗೆ ಚೋರನಹಳ್ಳಿ ಶಿವಣ್ಣ ಆಗ್ರಹ

Update: 2019-09-17 16:19 GMT

ಮೈಸೂರು,ಸೆ.17: ದಲಿತ ಎಂಬ ಕಾರಣಕ್ಕೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮದೊಳಕ್ಕೆ ಪ್ರವೇಶ ಕಲ್ಪಿಸದ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದರು.

ನಗರದ ಪುರಭವನದ ಬಳಿಯ ಅಂಬೇಡ್ಕರ್ ಪ್ರತಿಮೆ ಬಳಿ ಮಂಗಳವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಇದೊಂದು ಅಮಾನವೀಯ ಹೇಯ ಕೃತ್ಯ. ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಯಾವುದೇ ಸರಕಾರಗಳು ಕಾನೂನುಬಾಹಿರ ಅಸ್ಪೃಶ್ಯತೆ ಆಚರಣೆಯನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಗುಡಿಸಲು ಮುಕ್ತ ಗ್ರಾಮವಾಗಿಸಿ ಮೂಲಸೌಕರ್ಯವನ್ನು ಒದಗಿಸಲು ಹೋದ ಸಂಸದರಿಗೆ ಅವಕಾಶ ನೀಡದಿರುವುದು ದುರುದೃಷ್ಟಕರ ಎಂದು ಹೇಳಿದರು.

ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಸಂಸದರಿಗೆ ಈ ರೀತಿ ಅವಮಾನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದಾದರೆ ಶೋಷಿತ ವರ್ಗದ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಅವರು, ಪೊಲೀಸರು ತಪ್ಪಿತಸ್ಥರ ವಿರುದ್ಧ ಸುಮುಟೋ ಪ್ರಕರಣ ದಾಖಲಿಸಿ ಎಲ್ಲಾ ಆರೋಪಿಗಳನ್ನು ಗಡಿಪಾರು ಮಾಡಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಇಂತಹ ಪ್ರಕರಣಗಳು ಮರುಕಳುಹಿಸದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಎಡೆದೊರೆ ಮಹದೇವಯ್ಯ, ವಕೀಲ ಪಡುವಾರಹಳ್ಳಿ ರಾಮಕೃಷ್ಣ, ಮೂಡಹಳ್ಳಿ ಮಹದೇವ್, ಟಿ.ಎಂ.ಗೋವಿಂದರಾಜ್, ಸಣ್ಣಯ್ಯ ಲಕ್ಕೂರ್ ಅರಶಿನಕೆರೆ ಶಿವರಾಜ್, ಕಾಟೂರು ಟಿ.ದೇವರಾಜ್, ಎಂ.ರಾಮಕೃಷ್ಣ, ನಿಂಗರಾಜ್ ಮಲ್ಲಾಡಿ, ಕಲ್ಲಹಳ್ಳಿ ಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News