ಫೈನಾನ್ಸ್ ಕಂಪನಿ ಕಿರುಕುಳ ಆರೋಪ: ವ್ಯಕ್ತಿ ಆತ್ಮಹತ್ಯೆ

Update: 2019-09-17 16:40 GMT

ಮಂಡ್ಯ, ಸೆ.17: ಖಾಸಗಿ ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಹೆದರಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಶಂಕರಯ್ಯ ಅವರ ಮಗ ಪ್ರದೀಪ್ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರ ಪತ್ನಿ ಹೇಮಾ ಅವರು ಹಿಂದಿನ ದಿನವಷ್ಟೆ ಅನಾರೋಗ್ಯದಿಂದ ನಿಧನರಾಗಿದ್ದರು.

ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡಿದ್ದ ಪ್ರದೀಪ್ ಖಾಸಗಿ ಫೈನಾನ್ಸ್ ಕಂಪನಿನೊಂದರಲ್ಲಿ ಸಾಲ ಪಡೆದಿದ್ದು, ಪತ್ನಿ ಅಂತ್ಯಕ್ರಿಯೆಗೆ ಹೆಮ್ಮನಹಳ್ಳಿಗೆ ಬಂದಿದ್ದ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಫೈನಾನ್ಸ್ ಕಂಪನಿಯ ಐದು ಮಂದಿ ನೌಕರರು ಪ್ರದೀಪ್ ಸಾಲ ತೆಗೆದುಕೊಳ್ಳಲು ಜಾಮೀನು ನೀಡಿದ್ದ ಕುಣಿಗಲ್ ಮೂಲದ ವ್ಯಕ್ತಿಯನ್ನು ಕರೆದುಕೊಂಡು ಗ್ರಾಮಕ್ಕೆ ಬಂದಿದ್ದರು. 

ಈ ಸಂದರ್ಭದಲ್ಲಿ ಖಾಸಗಿ ಕಂಪನಿಯವರು ಪ್ರದೀಪ್ ಅವರ ನಾದಿನಿ ಮತ್ತು ತಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದು, ಇದರಿಂದ ಬೆದರಿದ ಪ್ರದೀಪ್ ಮನೆಯೊಳಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ಪ್ರದೀಪ್ ಅವರ ಮನೆ ಬಳಿ ಹೋಗಿ ಖಾಸಗಿ ಕಂಪನಿಯ ನೌಕರರನ್ನು ತೀವ್ರವಾಗಿ ತರಾಟಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಸಿಪಿಐ ಮಹೇಶ್ ಹಾಗು ಪಿಎಸ್‍ಐ ಮಂಜೇಗೌಡ ಫೈನಾನ್ಸ್ ನೌಕರರನ್ನು ವಶಕ್ಕೆ ಪಡೆದುಕೊಂಡರು.

ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿ ರೇಣುಕಮ್ಮ ಇದ್ದಾರೆ. ಮುಂಜಾಗೃತ ಕ್ರಮವಾಗಿ ಗ್ರಾಮದಲ್ಲಿ ಬಿಗಿಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News