ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ: ಎಂ.ಎ ಪರೀಕ್ಷೆಯಲ್ಲಿ ಅನಿತಾ ಪಿ.ಪೂಜಾರಿಗೆ ಪ್ರಥಮ ರ್ಯಾಂಕ್

Update: 2019-09-17 17:57 GMT

ಮುಂಬಯಿ, ಸೆ.17: ಮುಂಬಯಿ ವಿಶ್ವವಿದ್ಯಾಲಯ ಕಳೆದ 2019ನೇ ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಅನಿತಾ ಪಿ.ಪೂಜಾರಿ ತಾಕೊಡೆ ಅವರು ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಕೊಡೆಯ ಅನಿತಾ ಅವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಅನಿತಾ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿ, ಕವಯತ್ರಿ, ಕಥೆಗಾರ್ಥಿ, ಅಂಕಣಕಾರರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದು, ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ) ಇವರ ಪ್ರಕಟಿತ ಕೃತಿಗಳಾಗಿವೆ. 

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಜಿ.ಎನ್ ಉಪಾಧ್ಯ ಮಾರ್ಗದರ್ಶನದಿಂದ ಎಂ.ಎ ಪದವಿಗೆ ಉಪಾಧ್ಯರು ಸಿದ್ಧಪಡಿಸಿದ ಡಾ. ಬಿ.ಜನಾರ್ದನ ಭಟ್ ಅವರ ಜೀವನ ಸಾಧನೆ ಶೋಧ ಸಂಪ್ರಬಂಧ ಈಗಾಗಲೇ ಸವ್ಯಸಾಚಿ ಎಂಬ ಹೆಸರಿನಲ್ಲಿ ಬೆಳಕು ಕಂಡಿದೆ.  ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಮುಂಬಯಿಯ ಹೆಸರಾಂತ ರಂಗನಟ ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಹಿನ್ನೆಲೆಯಲ್ಲಿ ಕೃತಿಯೊಂದನ್ನು ರಚಿಸಿದ್ದಾರೆ.

ಅನಿತಾ ಅವರ ಅಂತರಂಗದ ಮೃದಂಗ ಕೃತಿಗೆ ಜಗಜ್ಯೋತಿ ಕಲಾವೃಂದ (ರಿ.) ಸಂಸ್ಥೆಯಿಂದ ಶ್ರೀಮತಿ ಸುಶೀಲ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ಹಾಗೂ ಜನಸ್ಪಂದನ ಟ್ರಸ್ಟ್ (ರಿ.) ಶಿಕಾರಿಪುರ ವತಿಯಿಂದ ಅಲ್ಲಮ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಈ ಬಾರಿಯ ಪ್ರತಿಷ್ಠಿತ ದಸರಾ ಕವಿಗೋಷ್ಠಿಗೂ ಇವರು ಆಯ್ಕೆಯಾಗಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಕಾರ್ಯಕಾರಿ ಸಮಿತಿ ಸದಸ್ಯೆ ಆಗಿರುವ ಅನಿತಾ ತಾಕೋಡೆ ಸಾಧನೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ  ಡಾ. ಜಿ.ಎನ್ ಉಪಾಧ್ಯ ಶ್ಲಾಘಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News