ಹನೂರು: ಕಾಡಂಚಿನ ಗ್ರಾಮಗಳಿಗೆ ಜಿಲ್ಲಾಧಿಕಾರಿ ಕಾವೇರಿ ಭೇಟಿ, ಪರಿಶೀಲನೆ

Update: 2019-09-17 18:06 GMT

ಹನೂರು, ಸೆ.17: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ. ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ದೊಡ್ಡಾಣೆ, ಕೂಕ್ಬರೆ, ತೊಕೆರೆ ಗ್ರಾಮಗಳಿಗೆ  ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಂಗಳವಾರ ಭೇಟಿ ನೀಡಿ ಅಗತ್ಯ ಮೂಲಸೌಕರ್ಯದ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ತಾಲೂಕಿನ ಕಾಡಂಚಿನಲ್ಲಿರುವ ದೊಡ್ಡಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಇಡೀ ದಿನ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಕೊಕ್ಬರೆ ತೋಕೆರೆ ಹಾಗೂ ಗ್ರಾಮಸ್ಥರು ಪಡಿತರ ತರಲು ಕೊಂಬುಡಿಕ್ಕಿಗೆ ಹೋಗಬೇಕು. ವೃದ್ಧಾಪ್ಯ ವೇತನ, ಗ್ರಾಮಕ್ಕೆ ಸಮರ್ಪಕ ವಾಹನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಕ್ರಮ: ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಕ್ಕಳೊಂದಿಗೆ ಕೆಲಕಾಲ ಕಲಿಕೆಯ ಬಗ್ಗೆ ಚರ್ಚೆ ನಡೆಸಿದರು. ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಅಗತ್ಯವಿದ್ದು ಕೂಡಲೇ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳ ಪರಿಶೀಲನೆ ನಡೆಸಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.

ಪ್ರತಿನಿತ್ಯ ಜೀಪ್‍ಗಳ ಸಂಚಾರ: ಸಂಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತಿನಿತ್ಯ ಜೀಪ್‍ಗಳ ಸಂಚಾರ ಆರಂಭಿಸಲಾಗುವುದು. ಗ್ರಾಮಸ್ಥರು ತಾವೇ ದರ ನಿಗದಿಪಡಿಸಿದರೆ ಅರಣ್ಯಾಧಿಕಾರಿಗಳು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಿದ್ದಾರೆ. ಇದಕ್ಕೆ ಗ್ರಾಮಸ್ಥರು ಸಹಕರಿಸುವಂತೆ ತಿಳಿಸಿದರು. 

ಈ ಸಂದರ್ಭದಲ್ಲಿ ಮಲೆಮಹದೇಶ್ವರ ವನ್ಯದಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಹನೂರು ತಹಶಿಲ್ದಾರ್ ನಾಗರಾಜು, ವಲಯ ಅರಣ್ಯಾಧಿಕಾರಿಗಳಾದ ಎ.ರಾಜೇಶ್ ಅಗವಾಲ್, ಅರುಣ್‍ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್, ಗ್ರಾಮಲೆಕ್ಕಾಧಿಕಾರಿ ವಿನೋದ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News