ಸರ್ಕಾರಿ ಕೊಠಡಿಗಳಲ್ಲಿಯೇ ಉಳಿದುಕೊಂಡಿವೆಯೇ ನೆರೆ ದೇಣಿಗೆ ಸಾಮಗ್ರಿಗಳು !?

Update: 2019-09-17 18:21 GMT

ಶಿವಮೊಗ್ಗ, ಸೆ. 17: ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ, ನಾಗರಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ಸ್ಥಳೀಯಾಡಳಿತಗಳಿಗೆ ನೀಡಿದ್ದ ಸಾಮಗ್ರಿಗಳು ಜಿಲ್ಲೆಯ ಕೆಲವೆಡೆ ಸರ್ಕಾರಿ ಕಚೇರಿಗಳ ಕೊಠಡಿಗಳಲ್ಲಿಯೇ ಉಳಿದುಕೊಂಡಿರುವ ದೂರುಗಳು ಕೇಳಿಬರುತ್ತಿದೆ. 

ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಉಕ್ಕಿ ಹರಿಯುತ್ತಿದ್ದ ನದಿ, ಹಳ್ಳಕೊಳ್ಳಗಳು ಶಾಂತವಾಗಿವೆ. ಪ್ರವಾಹ ಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಸಂತ್ರಸ್ತರಿಗೆ ತೆರೆಯಲಾಗಿದ್ದ ಪುನರ್ವಸತಿ ಕೇಂದ್ರಗಳು ಈಗ ಇಲ್ಲವಾಗಿವೆ.  

ಇದರಿಂದ ತಾಲೂಕು ಹಾಗೂ ಸ್ಥಳೀಯಾಡಳಿತಗಳಿಗೆ ನಾಗರೀಕರು ನೀಡಿದ್ದ ನೆರವಿನ ದೇಣಿಗೆ, ಕಚೇರಿಗಳ ಕೊಠಡಿಗಳಲ್ಲಿಯೇ ಉಳಿದುಕೊಂಡಿದೆ. ಕೆಲ ಸಾಮಗ್ರಿಗಳು ಹಾಳಾಗುವ ಸ್ಥಿತಿಗೆ ತಲುಪಿದೆ. ಯಾವ ರೀತಿಯಲ್ಲಿ ಸಾಮಗ್ರಿ ವಿಲೇ ಮಾಡಬೇಕು ಎಂಬುವುದು ಅಧಿಕಾರಿಗಳಿಗೆ ತೋಚದಂತಾಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. 

ಈ ಹಿಂದೆ ತಾಲೂಕು ಕಚೇರಿ ಹಾಗೂ ಸ್ಥಳೀಯಾಡಳಿತಗಳಿಗೆ ನಾಗರಿಕರು, ಸಂಘಸಂಸ್ಥೆಗಳು ನೀಡುತ್ತಿದ್ದ ನೆರವಿನ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ತಂಗಿದ್ದ ಸಂತ್ರಸ್ತರಿಗೆ ವಿತರಿಸಿದ್ದರು. ಆದರೆ ಪುನರ್ವಸತಿ ಕೇಂದ್ರಗಳನ್ನು ಮುಚ್ಚಿದ ನಂತರ ಹಾಗೂ ಪ್ರವಾಹ ಸ್ಥಿತಿ ನಿಯಂತ್ರಣಗೊಂಡ ತದನಂತರ, ಕೆಲವೆಡೆ ಸಂಗ್ರಹವಾದ ನೆರವಿನ ಸಾಮಗ್ರಿಗಳು ಸರ್ಕಾರಿ ಕಚೇರಿಗಳ ಕೊಠಡಿಗಳಲ್ಲಿಯೇ ಉಳಿದುಕೊಂಡಿವೆ ಎಂಬ ಮಾಹಿತಿಗಳು ಆಡಳಿತ ವಲಯದಿಂದ ಕೇಳಿಬರುತ್ತಿದೆ. 

ಇದಕ್ಕೆ ನಿದರ್ಶನ ಎಂಬಂತೆ, ಶಿವಮೊಗ್ಗ ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿದ್ದ ವಿಪತ್ತು ಪರಿಹಾರ ಸ್ವೀಕೃತಿ ಕೇಂದ್ರದಲ್ಲಿ ನಾಗರಿಕರು ನೀಡಿದ್ದ ಕೆಲ ದೇಣಿಗೆ ಸಾಮಗ್ರಿಗಳು ವಿಲೇಯಾಗದೆ ಹಾಗೆಯೇ ಉಳಿದುಕೊಂಡಿವೆ. ಅಕ್ಕಿ, ಎಣ್ಣೆ ಪ್ಯಾಕೆಟ್, ಬೆಡ್‍ಶೀಟ್, ಬಿಸ್ಕೇಟ್ ಮತ್ತೀತರ ವಸ್ತುಗಳು ಕೊಠಡಿಯಲ್ಲಿವೆ ಎಂಬ ಮಾಹಿತಿ ಕೇಳಿಬಂದಿದೆ. 

ಉಳಿದಂತೆ ನೆರೆ ಸಾಮಗ್ರಿಗಳ ವಿತರಣೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಮುಂದಿದೆ. ಆಯುಕ್ತರಾಗಿದ್ದ ಚಾರುಲತಾ ಸೋಮಲ್‍ರವರ ಕಾಳಜಿಯ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ಸಾಮಗ್ರಿಗಳು ನೆರೆ ಸಂತ್ರಸ್ತರಿಗೆ ತಲುಪಿವೆ. ಲಭ್ಯ ಮಾಹಿತಿ ಅನುಸಾರ ಪಾಲಿಕೆಯಲ್ಲಿ ಗ್ಯಾಸ್ ಸ್ಟೌವ್‍ಗಳು ಉಳಿದಿವೆ. ಅರ್ಹರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ವಿತರಣೆ ಇನ್ನಷ್ಟೆ ಆಗಬೇಕಾಗಿದೆ ಎಂದು ತಿಳಿದುಬಂದಿದೆ. 

ಗಮನಹರಿಸಲಿ: ಜಿಲ್ಲೆಯ ತಾಲೂಕು ಹಾಗೂ ಸ್ಥಳೀಯಾಡಳಿತಗಳಲ್ಲಿ ತೆರೆಯಲಾಗಿದ್ದ ಪರಿಹಾರ ಸ್ವೀಕೃತಿ ಕೇಂದ್ರಗಳಲ್ಲಿ ನಾಗರೀಕರು ನೀಡಿದ್ದ ನೆರವಿನ ಸಾಮಗ್ರಿಗಳು ಸಮರ್ಪಕವಾಗಿ ವಿಲೇ ಮಾಡಲಾಗಿದೆಯೇ? ಒಂದು ವೇಳೆ ಸಾಮಗ್ರಿಗಳು ಉಳಿದುಕೊಂಡಿದ್ದರೆ, ಅವುಗಳ ಸದ್ಭಳಕೆ ಮಾಡುವತ್ತ ಜಿಲ್ಲಾಡಳಿತ ಅಗತ್ಯ ಗಮನಹರಿಸಬೇಕಾಗಿದೆ. 

ಭಾರೀ ಅನಾಹುತ: ಕಳೆದ ತಿಂಗಳ ಆಗಸ್ಟ್ ಮೊದಲೆರೆಡು ವಾರದಲ್ಲಿ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿದ್ದ ಧಾರಾಕಾರ ಮಳೆಯಿಂದ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಶಿವಮೊಗ್ಗ ನಗರದಲ್ಲಿ ಹಲವು ಬಡಾವಣೆಗಳು ಜಲಾವೃತವಾಗಿದ್ದವು. ನೂರಾರು ಮನೆಗಳು ಕುಸಿದು ಬಿದ್ದಿದ್ದವು. ಸಾವಿರಾರು ಜನ ಸಂತ್ರಸ್ತರಾಗಿದ್ದರು. 

ಮತ್ತೊಂದೆಡೆ, ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಆಡಳಿತ ವಲಯ ಮಾತ್ರವಲ್ಲದೆ ಸಾರ್ವಜನಿಕ ವಲಯದಿಂದ ನೆರವಿನ ಮಹಾಪೂರವೇ ಹರಿದುಬಂದಿತ್ತು. ತಾಲೂಕು ಕಚೇರಿ, ಮಹಾನಗರ ಪಾಲಿಕೆಯಲ್ಲಿ ಪರಿಹಾರ ಸ್ವೀಕೃತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಕೇಂದ್ರಗಳಿಗೆ ನಾಗರೀಕರು-ಸಂಘಸಂಸ್ಥೆಗಳು ಬಟ್ಟೆ, ಔಷಧಿ, ಬೆಡ್‍ಶೀಟ್, ಚಾಪೆ ಮತ್ತೀತರ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News