ನೆರೆ ಸಂತ್ರಸ್ತರ ಸಂಕಟ: ಕೇಂದ್ರದ ನಿರ್ಲಕ್ಷ್ಯ

Update: 2019-09-18 05:33 GMT

ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಮತ್ತು ಮಳೆಯಿಂದ ಮನೆ ಮಾರು ಕಳೆದುಕೊಂಡು ಬೀದಿಯಲ್ಲಿ ಬಿದ್ದವರು ಬೀದಿಯಲ್ಲೇ ಇದ್ದಾರೆ. ಕನಿಷ್ಠ ಸೌಕರ್ಯಗಳಿಲ್ಲದ ತಾತ್ಕಾಲಿಕ ಶೆಡ್‌ಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವಾರು ವರ್ಷಗಳ ಕಠಿಣ ಪರಿಶ್ರಮದಿಂದ ಸಂಪಾದಿಸಿದ ಅಲ್ಪಸ್ವಲ್ಪಬಟ್ಟೆ ಬರೆ ಮತ್ತು ವಸ್ತುಗಳು, ಆಭರಣಗಳು ನೀರು ಪಾಲಾಗಿವೆ.ಒಂದು ಸುತ್ತಿನ ನೆರೆ ನೀರು ಇಳಿದಿದ್ದರೂ ಸಂತ್ರಸ್ತರ ಬದುಕು ಮೊದಲಿನಂತಾಗಿಲ್ಲ.ರಾಜ್ಯ ಸರಕಾರ ಕಲ್ಪಿಸಿದ ಪರಿಹಾರ ಯಾತಕ್ಕೂ ಸಾಲುವುದಿಲ್ಲ. ಕೇಂದ್ರದಿಂದ ಒಂದೇ ಒಂದು ಪೈಸೆ ಪರಿಹಾರ ಬಂದಿಲ್ಲ.

ಪ್ರವಾಹದಲ್ಲಿ ಜನರ ಬದುಕು ಮೂರಾಬಟ್ಟೆಯಾಗಿ ಒಂದೂವರೆ ತಿಂಗಳಾಯಿತು.ರಾಜ್ಯ ಸರಕಾರ ನಷ್ಟದ ಅಂದಾಜು ಮಾಡಿ 38 ಸಾವಿರ ಕೋಟಿ ರೂಪಾಯಿ ನೆರವು ಬೇಕೆಂದು ಕೇಂದ್ರ ಸರಕಾರಕ್ಕೆ ಮನವಿಯ ಮೇಲೆ ಮನವಿ ಮಾಡಿಕೊಂಡಿದೆ. ಆದರೆ ಕೇಂದ್ರ ಸರಕಾರ ನೆರವು ನೀಡಲು ಹಿಂದೆ ಮುಂದೆ ನೋಡುತ್ತಿದೆ. ಕರ್ನಾಟಕದಲ್ಲಿರುವುದೂ ಬಿಜೆಪಿ ಸರಕಾರ, ಕೇಂದ್ರದಲ್ಲಿರುವುದೂ ಬಿಜೆಪಿ ಸರಕಾರ. ಆದರೂ ರಾಜ್ಯದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾಕೆ ಮಲತಾಯಿ ಧೋರಣೆ ಅನುಸರಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ.

 ನೆರೆ ಹಾವಳಿ ಸಂಭವಿಸಿದ ಆರಂಭದ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಬ್ಬರೇ ರಾಜ್ಯದ ಎಲ್ಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುತ್ತಾಡಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಅವರ ನೆರವಿಗೆ ಆಗ ಯಾವ ಮಂತ್ರಿಗಳೂ ಇರಲಿಲ್ಲ. ಸಚಿವ ಸಂಪುಟ ರಚಿಸಲು ಬಿಜೆಪಿಯ ದ್ವಿಸದಸ್ಯ ಹೈಕಮಾಂಡ್ ಅನುಮತಿ ನೀಡಿರಲಿಲ್ಲ. ಆದರೂ ನೆರೆ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ 103 ತಾಲೂಕುಗಳು ಪ್ರವಾಹ ಪೀಡಿತ ಎಂದು ಘೋಷಿಸಲಾಯಿತು. ತುರ್ತು ಕಾರ್ಯಗಳಿಗಾಗಿ ಕಂದಾಯ ಇಲಾಖೆಯ ಮೂಲಕ 413 ಕೋಟಿ ರೂಪಾಯಿ ಬಿಡುಗಡೆ ಮಾಡಲಾಯಿತು. ಆದರೆ ಇದು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಇದ್ದಂತೆ, ಯಾತಕ್ಕೂ ಸಾಲುವುದಿಲ್ಲ.

ರಾಜ್ಯ ಸರಕಾರ ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪನವರು ಪದೇ ಪದೇ ಒತ್ತಾಯಿಸಿದ ನಂತರ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿ ಹೋದರು. ಇವರು ಮಾತ್ರವಲ್ಲ ಕೇಂದ್ರ ತಂಡ ಒಂದು ಸುತ್ತು ಸಮೀಕ್ಷೆ ನಡೆಸಿಕೊಂಡು ಹೋಯಿತು. ಆದರೂ ಕೇಂದ್ರದ ಕಲ್ಲು ಹೃದಯ ಕರಗಲಿಲ್ಲ. ಪ್ರವಾಹ ಪರಿಹಾರಕ್ಕೆ ವೂವತ್ತೆಂಟು ಸಾವಿರ ಕೋಟಿ ರೂಪಾಯಿ ನೆರವು ಬೇಕೆಂದು ರಾಜ್ಯ ಸರಕಾರ ಕೇಳಿದರೆ, ಕೇಂದ್ರ ಸರಕಾರ ನೀವು ಹೆಚ್ಚಿನ ಹಣ ಕೇಳಿದ್ದೀರಿ, ಇದಕ್ಕೆ ಸ್ಪಷ್ಟನೆ ಕೊಡಿ ಎಂದು ರಾಜ್ಯ ಸರಕಾರದ ಮನವಿಯನ್ನು ವಾಪಸ್ ಕಳಿಸಿದೆ. ಬೀದಿಗೆ ಬಿದ್ದ ಜನರೊಂದಿಗೆ ಚೆಲ್ಲಾಟ ಆಡುವುದು ಮೋದಿ ಸರಕಾರಕ್ಕೆ ಶೋಭೆ ತರುವುದಿಲ್ಲ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಕೇಂದ್ರದ ಬಿಜೆಪಿ ನಾಯಕರಿಗೆ ಅಸಮಾಧಾನ ಇದ್ದರೆ, ಕೋಪವಿದ್ದರೆ ಅದರ ಸೇಡನ್ನು ಪ್ರವಾಹ ಸಂತ್ರಸ್ತರ ಮೇಲೆ ತೀರಿಸಿಕೊಳ್ಳುವುದು ಮನುಷ್ಯತ್ವವಲ್ಲ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಎದುರಿಗೆ ನಿಂತು ಮಾತಾಡುವ ಧೈರ್ಯ ರಾಜ್ಯದ ಯಾವ ಬಿಜೆಪಿ ನಾಯಕರಿಗೂ ಇಲ್ಲ. ರಾಜ್ಯದ ಜನ 25 ಬಿಜೆಪಿ ಸಂಸದರನ್ನು ಕಳಿಸಿದ್ದರೂ ಅವರೆಲ್ಲರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವುದಷ್ಟೇ ಸಾಕಾಗಿದೆ. ಇನ್ನು ಕೆಲವು ಬಿಜೆಪಿ ಮಂತ್ರಿಗಳು ಹಾಗೂ ಸಂಸದರು ಪ್ರವಾಹದ ಬಗ್ಗೆ ಮಾತನಾಡದೆ ಅನವಶ್ಯಕವಾಗಿ ಕೋಮು ಪ್ರಚೋದಕ ಮಾತುಗಳನ್ನಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರನ್ನು ಬೈಯಲು ಪೈಪೋಟಿ ನಡೆಸುವ ಸಂಸದ, ಶಾಸಕರು ಅಪ್ಪಿತಪ್ಪಿಯೂ ಪ್ರವಾಹ ಪೀಡಿತರ ಬಗ್ಗೆ ಮಾತಾಡುವುದಿಲ್ಲ.

ಪ್ರವಾಹದ ಹೊಡೆತಕ್ಕೆ ಸಿಲುಕಿದ 4.6 ಲಕ್ಷ ಜನ ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ. ಇವರಿಗೆ ಮುಂದೆಲ್ಲಿ ಹೋಗಬೇಕೆಂದು ಗೊತ್ತಿಲ್ಲ. ಭವಿಷ್ಯಕ್ಕೆ ಕತ್ತಲು ಕವಿದಿದೆ. 87 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವಾರ ಕಾಳಜಿ ಕೇಂದ್ರದಲ್ಲಿ ಆಹಾರವಿಲ್ಲದೆ ಒಂದು ಮಗು ಅಸು ನೀಗಿತು. ಹತ್ತು ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. ಸಂತ್ರಸ್ತರ ಬದುಕು ಛಿದ್ರವಾಗಿದೆ. ಹಳ್ಳಿಗಳು ಹಾಳಾಗಿ ಹೋಗಿವೆ.ರಸ್ತೆಗಳು, ಸೇತುವೆಗಳು ಸಂಪೂರ್ಣ ನಿರ್ನಾಮವಾಗಿವೆ. ಎಷ್ಟೋ ಕಡೆ ಸಂಪರ್ಕ ಕಡಿದು ಹೋಗಿದೆ. ಪರಿಹಾರವಾಗಿ ರಾಜ್ಯ ಸರಕಾರ ನೀಡಿರುವ ಹತ್ತು ಸಾವಿರ ರೂಪಾಯಿ ಚೆಕ್ ಕೂಡ ಬೌನ್ಸ್ ಆಗುತ್ತಿರುವ ಘಟನೆಗಳು ವರದಿಯಾಗಿವೆ. ಮನೆ ಹಾಗೂ ಜಮೀನು ಕಳೆದುಕೊಂಡ ಆರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರ ಸಕಾಲದಲ್ಲಿ ನೆರವು ನೀಡಿದ್ದರೆ ಈ ದುರಂತಗಳು ಸಂಭವಿಸುತ್ತಿರಲಿಲ್ಲ. ಈ ಸಾವುಗಳು ಕೇಂದ್ರ ಸರಕಾರ ಮಾಡಿದ ಕೊಲೆ ಅಲ್ಲದೇ ಬೇರೇನೂ ಅಲ್ಲ. ಈ ರಕ್ತದ ಕಲೆ ಮೋದಿ ಸರಕಾರಕ್ಕೆ ಅಂಟಿಕೊಂಡಿದೆ.

ರಾಜ್ಯದ ಬಿಜೆಪಿ ಸರಕಾರಕ್ಕೆ ಹಾಗೂ ಬಿಜೆಪಿ ಸಂಸದರಿಗೆ ಮಾನ ಮರ್ಯಾದೆ ಮತ್ತು ಮನುಷ್ಯತ್ವ ಇದ್ದರೆ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ದಾರುಣ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲಿ. ಇದೇ ಪ್ರವಾಹ ಹಾಗೂ ನಷ್ಟ ಗುಜರಾತಿನಲ್ಲಿ, ಉತ್ತರ ಭಾರತದ ರಾಜ್ಯಗಳಲ್ಲಿ ಸಂಭವಿಸಿದ್ದರೆ ಕೇಂದ್ರದ ಮೋದಿ ಸರಕಾರ ಇಷ್ಟು ಉದಾಸೀನ ಧೋರಣೆ ತಾಳುತ್ತಿತ್ತೇ?

ಕರ್ನಾಟಕ ಸೇರಿದಂತೆ ದಕ್ಷಿಣದ ನಾಲ್ಕು ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳು ದೇಶದ ಖಜಾನೆಗೆ ಶೇ. 50ಕ್ಕಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುತ್ತವೆ. ಹೀಗಿರುವಾಗ ಕೇಂದ್ರ ಸರಕಾರ ನೀಡುವ ನೆರೆ ಪರಿಹಾರ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ನಮ್ಮ ಪಾಲಿನ ಹಣ ಪಡೆಯಲು ಅಂಗಲಾಚಬೇಕಾಗಿಲ್ಲ. ಯಾರಿಗೂ ಬೆಣ್ಣೆ ಹಚ್ಚ ಬೇಕಾಗಿಲ್ಲ. ಕೇಂದ್ರ ಸರಕಾರ ಇನ್ನಾದರೂ ಇದನ್ನು ಅರ್ಥಮಾಡಿಕೊಂಡು ಮನುಷ್ಯತ್ವದಿಂದ ವರ್ತಿಸಲಿ. ಕರ್ನಾಟಕ ಸರಕಾರ ಕೇಳಿದ ಮೂವತ್ತೆಂಟು ಸಾವಿರ ಕೋಟಿ ರೂ. ನೆರವನ್ನು ತಕ್ಷಣ ಬಿಡುಗಡೆ ಮಾಡಲಿ. ಇಂತಹ ಸಂದರ್ಭದಲ್ಲಿ ಸ್ಪಷ್ಟನೆ ಕೇಳುವ ಕ್ರೌರ್ಯ ಸರಿಯಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ನು ಮುಂದೆ ಕೇಂದ್ರದ ನೆರವಿಗಾಗಿ ಅಂಗಲಾಚುವ ಬದಲು ಹಕ್ಕಿನಿಂದ ಕೇಳಲಿ. ಇದಕ್ಕಾಗಿ ಸರ್ವ ಪಕ್ಷಗಳ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಲಿ. ರಾಜ್ಯದ ಪ್ರತಿಪಕ್ಷಗಳು ಕೂಡಾ ನೆರವು ನೀಡದೆ ಸತಾಯಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ, ಚಳವಳಿ ನಡೆಸದೇ ಮೌನ ತಾಳಿದ್ದು ಸರಿಯಲ್ಲ. ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಧ್ವನಿಯೆತ್ತಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News