ರೋರಿಚ್ ಎಸ್ಟೇಟ್‌ನಲ್ಲಿ ಫಿಲಂ ಸಿಟಿ: ಬಿಎಸ್‌ವೈ ದ್ವೇಷ, ನಾಶ ರಾಜಕಾರಣದ ಪ್ರತೀಕ- ಕುಮಾರಸ್ವಾಮಿ

Update: 2019-09-18 13:05 GMT

ಬೆಂಗಳೂರು, ಸೆ. 18: ‘ಜೀವ ವೈವಿಧ್ಯ ತಾಣ ರೋರಿಚ್ ಎಸ್ಟೇಟಿನಲ್ಲಿ ಫಿಲಂ ಸಿಟಿ ನಿರ್ಮಿಸುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದ್ವೇಷ-ನಾಶ ರಾಜಕಾರಣದ ಪ್ರತೀಕ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಬುಧವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಫಿಲಂ ಸಿಟಿಯನ್ನು ರಾಮನಗರದಲ್ಲಿ ಕಟ್ಟಬೇಕೆಂದು ಮೈತ್ರಿ ಸರಕಾರದಲ್ಲಿ ತೀರ್ಮಾನಿಸಲಾಗಿತ್ತು. ಈ ಮೂಲಕ ರಾಮನಗರ, ಬೆಂಗಳೂರು, ಬೆಂ.ಗ್ರಾಮಾಂತರ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಯೋಜನೆಯ ಉದ್ದೇಶಗಳ್ಲೊಂದು. ಆದರೆ, ಅದನ್ನು ಸ್ಥಳಾಂತರಿಸುವ ನಿರ್ಧಾರದ ಮೂಲಕ ಯಡಿಯೂರಪ್ಪನವರು ರಾಮನಗರದ ವಿಚಾರದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಅತಿಕ್ರಮಣಕ್ಕೆ ತುತ್ತಾಗದೇ ಜೀವ ವೈವಿಧ್ಯ ಉಳಿಸಿಕೊಂಡಿರುವ ತಾಣ ರೋರಿಚ್ ಎಸ್ಟೇಟ್.

ಇದು ಫಿಲಂ ಸಿಟಿಗೆ ಸೂಕ್ತವಲ್ಲ. ಹಾಗೇನಾದರೂ ಇಲ್ಲಿ ಫಿಲಂ ಸಿಟಿ ಕಟ್ಟಿದರೆ ಪರಿಸರ ನಾಶದ ಜತೆಗೆ ಮಾನವ-ವನ್ಯ ಮೃಗಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ ಎಂದು ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News