ನಾಮಪತ್ರದಲ್ಲಿ ಸುಳ್ಳು ಮಾಹಿತಿ ಪ್ರಕರಣ: ಹೈಕೋರ್ಟ್ ನೋಟಿಸ್ ಸ್ವೀಕರಿಸಿದ ಪ್ರಜ್ವಲ್ ರೇವಣ್ಣ

Update: 2019-09-18 14:31 GMT

ಬೆಂಗಳೂರು, ಸೆ.18: ಚುನಾವಣಾ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಕೋರ್ಟ್ ನೀಡಿದ್ದ ನೋಟಿಸ್ ಅನ್ನು ಸ್ವೀಕರಿಸಿ, ತಮ್ಮ ಪರ ವಕೀಲ ಕೇಶವ ರೆಡ್ಡಿಯಿಂದ ವಕಾಲತ್ತು ಸಲ್ಲಿಕೆ ಮಾಡಿದ್ದಾರೆ.

ಈ ಕುರಿತು ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ನಾ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು ನೋಟಿಸ್ ನೀಡಿತ್ತು. ಆದರೆ, ಆ ನೋಟಿಸ್ ಪ್ರಜ್ವಲ್ ರೇವಣ್ಣ ಅವರಿಗೆ ತಲುಪಿರಲಿಲ್ಲ. ಹೀಗಾಗಿ, ನ್ಯಾಯಪೀಠವೇ ನೋಟಿಸ್ ಬಗ್ಗೆ ಪೇಪರ್ ಪಬ್ಲಿಕೇಷನ್ ಹೊರಡಿಸಲು ಅನುಮತಿ ನೀಡಿತ್ತು. ಹೀಗಾಗಿ, ಪೇಪರ್ ಪಬ್ಲಿಕೇಷನ್ ಹೊರಡಿಸಿದ ಬೆನ್ನಲ್ಲೇ ನೋಟಿಸ್ ಅನ್ನು ಸ್ವೀಕರಿಸಿದ್ದ ಪ್ರಜ್ವಲ್ ಅವರು ತಮ್ಮ ಪರ ವಕೀಲರ ಮೂಲಕ ವಕಾಲತ್ತು ಸಲ್ಲಿಕೆ ಮಾಡಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು, ಮೂರು ಬಾರಿ ನೋಟಿಸ್ ಜಾರಿಗೊಳಿಸಿದರೂ ರೇವಣ್ಣ ಅವರು ನೋಟಿಸ್ ಅನ್ನು ಸ್ವೀಕರಿಸುತ್ತಿಲ್ಲ. ಚುನಾವಣಾ ನಾಮಪತ್ರದಲ್ಲಿ ಸಲ್ಲಿಸಿದ ವಿಳಾಸದಲ್ಲಿ ಅವರಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಪ್ರಜ್ವಲ್ ಅವರೇ ಉದ್ದೇಶಪೂರ್ವಕವಾಗಿ ನೋಟಿಸ್ ಅನ್ನು ಸ್ವೀಕರಿಸುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು. ನ್ಯಾಯಪೀಠವು ವಕೀಲರ ವಾದ ಆಲಿಸಿ, ಪೇಪರ್ ಪಬ್ಲಿಕೇಷನ್‌ಗೆ ಅನುಮತಿ ನೀಡಿತ್ತು. ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News