ನೆರೆ ಪರಿಹಾರಕ್ಕಾಗಿ ಜೆಡಿಎಸ್ ನಿಯೋಗದಿಂದ ಶೀಘ್ರ ಪ್ರಧಾನಿ ಮೋದಿ ಭೇಟಿ: ದೇವೇಗೌಡ

Update: 2019-09-18 14:55 GMT

ಬೆಂಗಳೂರು, ಸೆ. 18: ರಾಜ್ಯದಲ್ಲಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹಿಸಿ ಜೆಡಿಎಸ್ ನಿಯೋಗ ಕೂಡಲೇ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದ ನಿಯೋಗದಿಂದ ಶೀಘ್ರವೇ ಪ್ರಧಾನಿ ಮೋದಿ ಭೇಟಿ ಮಾಡಿ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲಿದೆ. ಆ ಬಳಿಕವೂ ಅನುದಾನ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದರು.

ದಾಕ್ಷಿಣ್ಯ ಇಲ್ಲ: ಸಂತ್ರಸ್ತರ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡುವುದಲ್ಲಿ ನಾವು ಹಿಂದೆ ಬೀಳುವುದಿಲ್ಲ. ಚಳವಳಿ ವಿಚಾರದಲ್ಲಿ ನಮಗೆ ಯಾವುದೇ ದಾಕ್ಷಿಣ್ಯ ಇಲ್ಲ. ಹೋರಾಟ ಮಾಡುವುದನ್ನು ನಾನು ಯಾರಿಂದಲೂ ಕಲಿಯಬೇಕಿಲ್ಲ ಎಂದು ದೇವೇಗೌಡ ಗುಡುಗಿದರು.

ನೆರೆ ಪರಿಹಾರಕ್ಕೆ ಆಗ್ರಹಿಸಿ ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೆ. ಆ ಪತ್ರಕ್ಕೆ ಉತ್ತರ ಬಂದಿಲ್ಲ. ಪಾಪ ಮೋದಿಯವರು ಕಾಶ್ಮೀರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಮುಳುಗಿದ್ದಾರೆ. ಹೀಗಾಗಿ ನನ್ನ ಪತ್ರ ನೋಡಲು ಅವರಿಗೆ ಸಮಯ ಸಿಕ್ಕಿಲ್ಲ ಎಂದು ದೇವೇಗೌಡ ಲೇವಡಿ ಮಾಡಿದರು.

ಎರಡು ಸರಕಾರಗಳ ವಿರುದ್ಧ ಪಾದಯಾತ್ರೆ ಮೂಲಕ ಹೋರಾಟ ಮಾಡಿದ್ದೇನೆ. ನೈಸ್ ಅಕ್ರಮದ ವಿರುದ್ಧವೂ ಚಳವಳಿ ನಡೆಸಿದ್ದೇನೆ. ಹೋರಾಟ ನನ್ನ ಜೀವನದ ಮಜಲು ಎಂದ ಅವರು, ಕಾಂಗ್ರೆಸ್ ಪ್ರತಿಭಟನೆ ಮಾಡಲಿ ಸಂತೋಷ ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News