ನೂತನ ಕೈಗಾರಿಕಾ ನೀತಿ: ಉತ್ತರ ಕರ್ನಾಟಕ, ಹಿಂದುಳಿದ ಜಿಲ್ಲೆಗಳಿಗೆ ಆದ್ಯತೆ- ಸಚಿವ ಜಗದೀಶ್ ಶೆಟ್ಟರ್

Update: 2019-09-18 17:03 GMT

ಬೆಂಗಳೂರು, ಸೆ. 18: ನೂತನ ಕೈಗಾರಿಕಾ ನೀತಿಯನ್ನು ಶೀಘ್ರವೇ ನಮ್ಮ ಸರಕಾರ ಜಾರಿಗೆ ತರಲಿದ್ದು, ಆ ನೀತಿಯಲ್ಲಿ ಉತ್ತರ ಕರ್ನಾಟಕ ಮತ್ತು ಹಿಂದುಳಿದ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ವಿದೇಶಿ ರಾಯಭಾರಿಗಳು ಹಾಗೂ ವಿದೇಶಿ ಹೂಡಿಕೆದಾರರು, ಉದ್ಯಮಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ದೇಶ ಕೈಗಾರಿಕೆಯಲ್ಲಿ ಮುಂದಿದೆ. ಈ ಅಭಿವೃದ್ಧಿಗೆ ಕರ್ನಾಟಕ ಹೆಚ್ಚು ಬಲವನ್ನು ತುಂಬಿದೆ ಎಂದರು.

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೆ ಸ್ಥಾನ ಹೊಂದಿದೆ. ಮುಂದಿನ ದಿನಗಳಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ತರುವತ್ತ ಸ್ನೇಹಪರ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಕ್ಕೆಂದು ನೂತನ ಕೈಗಾರಿಕಾ ನೀತಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ನೀತಿಯಲ್ಲಿ ಹಿಂದುಳಿದ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರ ಕುಸಿತದ ಬಗ್ಗೆ ಆತಂಕ ಮೂಡಿದೆ. ಕರ್ನಾಟಕದಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಕೈಗಾರಿಕೋದ್ಯಮಿಗಳಿಗೆ ಭೂ ಸ್ವಾಧೀನ ಹಾಗೂ ಸುಲಲಿತವಾಗಿ ವ್ಯವಹಾರ ಮಾಡಲು ಸರಕಾರ ಸಂಪೂರ್ಣ ಸಹಕಾರ ನೀಡುವ ರೀತಿಯಲ್ಲಿ ನೀತಿಯನ್ನು ಸಡಿಲ ಮಾಡಲಾಗುತ್ತಿದೆ.

ಒಟ್ಟಾರೆ ರಾಜ್ಯದಲ್ಲಿ ವ್ಯವಹಾರ ಮಾಡಲು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆದಾರರಿಗೆ ಬೇಕಾದ ಸ್ನೇಹಮಯ ವಾತಾವರಣ ನಿರ್ಮಾಣ ಮಾಡಿಕೊಡುವ ಹೊಣೆಗಾರಿಕೆ ನಮ್ಮ ಸರಕಾರದ ಮೇಲಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡಲು ಇರುವ ವಾತಾವರಣ, ಸೌಲಭ್ಯ, ವಿನಾಯಿತಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಬಳಿಕ ಮಾತನಾಡಿದ ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ದೇಶದ ಆರ್ಥಿಕತೆ ಬೆಳವಣಿಗೆಗೆ ಕರ್ನಾಟಕದ ಪಾಲು ಹೆಚ್ಚಿದೆ. ಕೈಗಾರಿಕೆಯಲ್ಲಿನ ಪ್ರತಿ ವಲಯಗಳಿಗೂ ಪ್ರಾಮುಖ್ಯತೆ ನೀಡಲು ಪ್ರತ್ಯೇಕವಾಗಿ ಕ್ಲಸ್ಟರ್ ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.

ಸಭೆಯಲ್ಲಿ ಇಸ್ರೇಲ್, ಸ್ವಿಜರ್‌ಲ್ಯಾಂಡ್, ಜಪಾನ್, ಮಾಲ್ಡ್‌ವೀಸ್, ಸ್ಪೈನ್ ಸೇರಿದಂತೆ ವಿವಿಧ ದೇಶಗಳ ರಾಯಭಾರಿಗಳು ಪಾಲ್ಗೊಂಡಿದ್ದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಇಲಾಖೆ ನಿರ್ದೇಶಕರು ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News