ಈಶ್ವರಪ್ಪ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮಾಜಿ ಸಂಸದ ಧ್ರುವನಾರಾಯಣ

Update: 2019-09-18 18:08 GMT

ಮೈಸೂರು, ಸೆ.18: ರಾಜ್ಯದ ಒಬ್ಬ ಜವಾಬ್ದಾರಿಯುತ ಸಚಿವರಾಗಿ ಕೆ.ಎಸ್.ಈಶ್ವರಪ್ಪ ಅವರು ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು ಅವರನ್ನು ಕೂಡಲೇ ಸಚಿವ ಸಂಪುಟದಿಂದ ಉಚ್ಚಾಟಿಸಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಜವಾಬ್ದಾರಿಯುತ ಸಚಿವರಾಗಿ ಕೆ.ಎಸ್.ಈಶ್ವರಪ್ಪ ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ವಡ್ಡ, ದಡ್ಡ ಮತ್ತು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಸಲ್ಮಾನರ ಮತ ಪಡೆದು ಶಾಸಕರಾಗಿರುವವರು ಹಿಜಡಾಗಳು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇವರ ಈ ಹೇಳಿಕೆಗಳು ಜಾತಿನಿಂದನೆಯಾಗಿದ್ದು, ಕೂಡಲೇ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಬಸವಣ್ಣ, ಕನಕದಾಸರು ಹುಟ್ಟಿದ ನಾಡಲ್ಲಿ ಹುಟ್ಟಿರುವ ಇರು ಈ ರೀತಿ ಪದಪ್ರಯೋಗ ಮಾಡುವುದು ಸರಿಯಲ್ಲ. ಇಂತಹ ಪದಗಳನ್ನು ಪ್ರಯೋಗ ಮಾಡುವ ಮುನ್ನ ಯೋಚಿಸಬೇಕು. ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಡ್ಡ ದಡ್ಡ ಮತ್ತು ಮುಸಲ್ಮಾನರ ಮತಗಳನ್ನು ಪಡೆದವರು ಹಿಜಡಾಗಳು ಎಂಬ ಹೇಳಿಕೆ ಘೋರ ಅಪರಾಧವಾಗಿದ್ದು, ಇದು ಬಹಳ ಖಂಡನೀಯ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕಿತ್ತುಹಾಕಬೇಕು ಎಂದು ಹೇಳಿದರು.

ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಹೋದಾಗ ಅವರು ಅಸ್ಪೃಶ್ಯರು ಎಂದು ಒಳಗೆ ಬಿಟ್ಟಿಲ್ಲ. ಇದೊಂದು ಅನಿಷ್ಟ ಪದ್ಧತಿಯಾಗಿದ್ದು, ಸಂವಿಧಾನಕ್ಕೆ ಅಪಚಾರವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಶ್ರೀನಿವಾಪ್ರಸಾದ್, ಪೇಜಾವರ ಶ್ರೀಗಳು ಇಂತಹ ಕಡೆ ಹೋಗಿ ಜಾತಿಯತೆಯನ್ನು ನಿರ್ಮೂಲನೆ ಮಾಡಲಿ ಎಂದು ಹೇಳಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಹಿಂದೂಪರ ಸಂಘಟನೆಗಳು ಇಂತಹ ಸಂದರ್ಭದಲ್ಲಿ ಮೌನ ವಹಿಸಿರುವುದು ಸರಿಯಲ್ಲ. ಇಂತಹ ವ್ಯವಸ್ಥೆಯಿಂದ ಸಾಕಷ್ಟು ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಆಗ ಹಿಂದೂಪರ ಸಂಘಟನೆಗಳು ಅವರ ವಿರುದ್ಧ ಅಟ್ಯಾಕ್ ಮಾಡುತ್ತವೆ ಎಂದು ಹೇಳಿದರು.

ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಎಸ್ಸಿ-ಎಸ್ಟಿ ಜನಾಂಗ ಅಭಿವೃದ್ದಿಗಾಗಿ ಎಸ್‍ಸಿಪಿ ಟಿಎಸ್‍ಪಿ ಯೋಜನೆಯನ್ನು ತಂದು ಕಾನೂನು ರೂಪಿಸಿದ್ದರು. ಆದರೆ ಬಿಜೆಪಿ ಸರಕಾರ ಪ್ರಕೃತಿ ವಿಕೋಪಕ್ಕೆ ಈ ಹಣ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಎಸ್‍ಸಿಪಿ ಟಿಎಸ್‍ಪಿ ಕಾನೂನಿಗೆ ಮಾಡಿದ ಅಪಚಾರವಾಗಿದ್ದು, ಈ ಯೋಜನೆಯ ಹಣವನ್ನು ಎನ್‍ಡಿಆರ್ಎಫ್ ಯೋಜನೆಗೆ ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಭೋವಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಸೀತಾರಾಂ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕೆಪಿಸಿಸಿ ಸದಸ್ಯ ಹೆಡತಲೆ ಮಂಜುನಾಥ್, ಕಾಂಗ್ರೆಸ್ ಯುವ ಮುಖಂಡ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಕುರಿತು ವಡ್ಡ,ದಡ್ಡ ಎಂದು ಹೇಳಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೋವಿ ಜನಾಂಗಕ್ಕೆ ಅಪಮಾನ ಮಾಡಿದ್ದು ಸಾರ್ವಜನಿಕವಾಗಿ ಅವರು ಕ್ಷಮೆ ಕೇಳದಿದ್ದರೆ ಮೈಸೂರು ದಸರಾಗೆ ಆಗಮಿಸುವ ಅವರನ್ನು ಘೇರಾವ್ ಮಾಡುವುದಾಗಿ ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News