ಸಾಮಾಜಿಕ, ರಾಜಕೀಯ ಬದಲಾವಣೆಯಲ್ಲಿ ಪತ್ರಕರ್ತರು, ಸಾಹಿತಿಗಳ ಪಾತ್ರ ಮುಖ್ಯ: ದಿನೇಶ್ ಅಮೀನ್‍ಮಟ್ಟು

Update: 2019-09-19 11:30 GMT

ಮೈಸೂರು,ಸೆ.18: ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯಲ್ಲಿ ಪತ್ರಕರ್ತರು, ಸಾಹಿತಿಗಳು ಹಾಗೂ ರಾಜಕಾರಣಿಗಳು ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಹಿರಿಯ ಪತ್ರಕರ್ತರ ದಿನೇಶ್ ಅಮೀನ್‍ಮಟ್ಟು ಅಭಿಪ್ರಾಯಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಬುಧವಾರ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಕರಾಮುವಿಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 'ಬಸವರಾಜ ಕಟ್ಟೀಮನಿ ಸಾಹಿತ್ಯ ಸಮಕಾಲೀನ ಸಂದರ್ಭ' ವಿಚಾರ ಸಂಕಿರಣದಲ್ಲಿ ಕಟ್ಟೀಮನಿ ಮತ್ತು ಪತ್ರಿಕಾರಂಗ ಕುರಿತು ಮಾತನಾಡಿದರು.

ವಿಶ್ವದ ಯಾವುದೇ ಕಾಲಘಟ್ಟದ ಇತಿಹಾಸ ಗಮನಿಸಿದರೂ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯಲ್ಲಿ ಪತ್ರಕರ್ತರು, ಸಾಹಿತಿಗಳು ಹಾಗೂ ರಾಜಕಾರಣಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಪ್ರಸ್ತುತ ಈ ಮೂರು ಪಾತ್ರಗಳು ದುರ್ಬಲ ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬಸವಣ್ಣನ ವಚನಗಳ ರೀತಿಯಲ್ಲೇ ಈಗ ಟ್ವೀಟ್‍ಗಳನ್ನು ಮಾಡಲಾಗುತ್ತಿದೆ. ಬಹಳ ದೊಡ್ಡ ದೊಡ್ಡದಾಗಿ ಬರೆದರೆ ಯಾರೂ ಓದುವುದಿಲ್ಲ. ಆ ಕಾಲದಲ್ಲಿ ಬಸವಣ್ಣ ವಚನಗಳ ಮೂಲಕ ಎಲ್ಲರನ್ನೂ ತಲುಪುತ್ತಿದ್ದರು ಎಂದು ಹೇಳಿದರು.

ಸಾಹಿತಿಗಳ ಕೆಲಸ ನಿರಪಾಯಕಾರಿ. ಯಾರನ್ನಾದರೂ ವಿಢಂಬನೆ ಮಾಡಬೇಕಾದರೆ ರೂಪಕ, ಉಪಮೆ ಬಳಸುತ್ತಾರೆ. ಆದರೆ, ಪತ್ರಕರ್ತ ನೇರವಾಗಿ, ಸ್ಪಷ್ಟವಾಗಿ ಬರೆಯಬೇಕು. ಈ ಬಗೆ ಆತನಿಗೆ ಕಂಟಕ ಆಗಬಹುದು. ಈ ಕಾರಣಕ್ಕಾಗಿಯೇ ಎಷ್ಟೋ ಪತ್ರಕರ್ತರು ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ. ಜಗದ್ಗುರು ಒಬ್ಬರ ಅನಾಚಾರವನ್ನು ಬಯಲಿಗೆಳೆಯಲು ಕಟ್ಟೀಮನಿ 'ಜರತಾರಿ ಜಗದ್ಗುರು' ಎಂದು ಕಾದಂಬರಿಯನ್ನೇ ಬರೆದರು. ಈಗ ಹಾಗೆ ಬರೆಯಲು ಸಾಧ್ಯವೇ? ಸ್ವಾಮೀಜಿ ವಿರುದ್ಧದ ಪ್ರಕರಣವೊಂದರಿಂದ ನ್ಯಾಯಮೂರ್ತಿಗಳೇ ಹಿಂದೆ ಸರಿಯುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಬಸವರಾಜ ಕಟ್ಟಿಮನಿ ಬಹಳ ಚಿಕ್ಕ ವಯಸ್ಸಿನಲ್ಲೇ ಪತ್ರಕರ್ತರಾಗಿ ಕೆಲಸ ಮಾಡಿದವರು. ಸಾಹಿತಿ, ಪತ್ರಕರ್ತ ಮತ್ತು ರಾಜಕಾರಣಿಯಾಗಿ ಮೂರು ಪಾತ್ರಗಳನ್ನು ಒಬ್ಬರೇ ಸಮಾಜದ ಬದಲಾವಣೆಗೆ ದುಡಿದವರು ಎಂದು ಹೇಳಿದರು. ಪತ್ರಕರ್ತರು ಸಾಹಿತಿ ಆಗಿದ್ದು ಅಥವಾ ಸಾಹಿತಿ ಪತ್ರಕರ್ತ ಆಗಿದ್ದನ್ನು ನೋಡಿದ್ದೇವೆ. ಆದರೆ, ಕಟ್ಟೀಮನಿ ಸಾಹಿತಿ, ಪತ್ರಕರ್ತ, ರಾಜಕಾರಣಿಯೂ ಆಗಿದ್ದರು. ಕಟ್ಟೀಮನಿ ಅವರ ವಿಶಿಷ್ಟ ವ್ಯಕ್ತಿತ್ವದ ಬಗ್ಗೆ ಅರಿವಿಲ್ಲ. ಅದನ್ನು ಹೆಚ್ಚು ಚರ್ಚೆಗೆ ಒಳಪಡಿಸಬೇಕು. ತಮ್ಮ ಬಹುಮುಖ ವ್ಯಕ್ತಿತ್ವದೊಂದಿಗೆ ನಮಗೆ ಅವರು ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.

ಪತ್ರಿಕೋಧ್ಯಮ ಓದಿಕೊಂಡು ಮಾಧ್ಯಮ ಕ್ಷೇತ್ರಕ್ಕೆ ಬಂದ ಮೇಲೆ ಪತ್ರಿಕೋಧ್ಯಮ ಹಾಳಾಗಿರುವುದು. ಈ ಹಿಂದೆ ಮಾಧ್ಯಮ ಶಿಕ್ಷಣ ಪಡೆಯದೆ ಅನೇಕ ಪತ್ರಕರ್ತರು ಒಳ್ಳೆಯ ಪತ್ರಿಕೋಧ್ಯಮವನ್ನು ಕಟ್ಟಿದ್ದರು. ಅದಕ್ಕೆ ಉದಾಹರಣೆಯಾಗಿ ಅರಣ್‍ ಶೌರಿ, ವಡ್ಡರಸೆ ರಘುರಾಮ್ ಭಟ್, ಲಂಕೇಶ್ ಸೇರಿದಂತೆ ಅನೇಕರುನು ನಾವು ನೋಡಬಹುದು. ಮಾಧ್ಯಮ ಶಿಕ್ಷಣ ಪಡೆದು  ಪತ್ರಿಕೋಧ್ಯಮಕ್ಕೆ ಬಂದ ಮೇಲೆ ಈ ರಂಗ ಕೂಡ ಹಾಳಾಗಿದೆ ಎಂದು ಹೇಳಿದರು.

ಕಟ್ಟೀಮನಿ ಅವರ ಬದುಕು ಮತ್ತು ಹೋರಾಟ' ಕುರಿತು ಹೋರಾಟಗಾರ ಸಿದ್ದನಗೌಡ ಪಾಟೀಲ ಮಾತನಾಡಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತ್ಯಂತರ ಸಂದರ್ಭದಲ್ಲಿ ರೂಪುಗೊಂಡ ಲೇಖಕ ಕಟ್ಟೀಮನಿ. ಉತ್ತಮ ಕುಲದವರೆನಿಸಿದರೂ ಕೃಷಿ ಕೂಲಿಕಾರರ ಕುಟುಂಬದವರಾಗಿದ್ದರು. ಸಾಮಾಜಿಕ ಅನಿಷ್ಠಗಳನ್ನು ಧಿಕ್ಕರಿಸಿದರೂ ಸಮಾಜ ಅವರನ್ನು ಅನಿಷ್ಠಗಳ ಸಂಕೋಲೆಯಲ್ಲೇ ಸಿಲುಕಿಸಿತು. ವಿಧಿವಿಧಾನ ಇಲ್ಲದೇ ನನ್ನ ಅಂತ್ಯ ಸಂಸ್ಕಾರ ಆಗಬೇಕು ಎಂದು ಹೇಳಿದ್ದರು. ಆದರೆ, ವಿಧಿವಿಧಾನಗಳಿಂದಲೇ ಅವರ ಸಂಸ್ಕಾರ ನಡೆಸಲಾಯಿತು. ಜಾತಿ ವಿರೋಧಿಸುತ್ತಿದ್ದ ಅವರನ್ನು ಜಾತಿಯಿಂದಲೇ ಜನ ಗುರುತಿಸುತ್ತಿದ್ದರು ಎಂದು ಕೆಲವು ಘಟನೆಗಳನ್ನು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News