ನೆರೆ ಸಂತ್ರಸ್ತ ರೈತರಿಗೆ ಸರಕಾರ ಪರ್ಯಾಯ ಭೂಮಿ ನೀಡಬೇಕು: ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

Update: 2019-09-18 18:24 GMT

ಕಳಸ, ಸೆ.18: ಪ್ರವಾಹದಿಂದ ಹಾನಿಯಾದ ಎಲ್ಲಾ ಕೃಷಿ ಭೂಮಿಗಳನ್ನು ಸರ್ವೆ ಮಾಡಿಸಿ ಇದರಲ್ಲಿ ದಾಖಲಾತಿ ಇರುವುದು ಯಾವುದು, ಇಲ್ಲದಿರುವುದು ಯಾವುದು ಎಂದು ಪಟ್ಟಿ ಮಾಡಿ ನಂತರ ರೈತರು ಎಲ್ಲೆಲ್ಲಿ ಎಷ್ಟು ಕೃಷಿ ಮಾಡಿದ್ದಾರೆ ಎಂದು ವಾಸ್ತವಾಂಶದ ಮಾಹಿತಿ ಕಲೆ ಹಾಕಬೇಕು. ನಂತರ ಅಂತಹ ರೈತರ ಮಾಹಿತಿ ಆಧರಿಸಿ ಎಲ್ಲಾ ಅತಿವೃಷ್ಟಿ ಸಂತ್ರಸ್ತ ರೈತರಿಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಸಂಜೆ ಕಳಸ ಹೋಬಳಿಯ ಕಾರಗದ್ದೆ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಚನ್ನಪ್ಪ ಗೌಡ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿರುವ ರೈತ ಸಾಗುವಳಿ ಚೀಟಿಗಾಗಿ ವಿವಿಧ ಫಾರಂ ಗಳಲ್ಲಿ ದಾಖಲಾತಿಗಾಗಿ ಅರ್ಜಿ ಹಾಕಿದ್ದಾರೆ. ಅಂತವರನ್ನು ಖಾತ್ರಿ ಮಾಡಿಕೊಂಡು ರೈತರಿಗೆ ಆದ ನಷ್ಟವನ್ನು ನಷ್ಟ ಎಂದೇ ಪರಿಗಣಿಸಿ ದಾಖಲಾತಿ ಇಲ್ಲದಿದ್ದರೂ ಅವರಿಗೆ ನ್ಯಾಯಯುತವಾಗಿ ಪರಿಹಾರ ಕೊಡಬೇಕು.

ಮಲೆನಾಡಿನಲ್ಲಿ ಈ ಬಾರಿ ವಿಚಿತ್ರವಾದ ರೀತಿಯಲ್ಲಿ ಪ್ರವಾಹ ಬಂದಿದೆ. ಇಲ್ಲಿಯ ವಾಸ್ತವ ಸತ್ಯಾ ಸತ್ಯತೆ ಇನ್ನೂ ಸರಕಾರಕ್ಕೆ ಅರ್ಥ ಆಗಲಿಲ್ಲ. ಈ ಅರ್ಥ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ. ಅದ್ಯಾವ ರೀತಿಯಲ್ಲಿ ಸರಕಾರಕ್ಕೆ ಅಧಿಕಾರಿಗಳು ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಭಾಗದಲ್ಲಿ ಆಗಿರುವ ಪ್ರವಾಹಗಳ ಸ್ಥಳಕ್ಕೆ ಬೇಟಿ ನೀಡಿ ವರದಿಯನ್ನು ತಯಾರಿಸಬೇಕು. ಈ ಬಗ್ಗೆ ಮುಖ್ಯ ಮಂತ್ರಿಗಳ ಗಮನವನ್ನು ಸೆಳೆಯುತ್ತೇನೆ. ಸರಕಾರ ಪ್ರಾರಂಭದಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ಕೇವಲ 3800 ರೂ ಚೆಕ್ ನೀಡಿತ್ತು. ಇದನ್ನು ರೈತ ಸಂಘ ಪ್ರಶ್ನೆ ಮಾಡಿದವ ಮೇಲೆ ಮತ್ತೆ 6200 ರೂ. ಗಳ ಚೆಕ್ ನೀಡಿದೆ. ಆದರೆ ಅದರಲ್ಲಿ ಇನ್ನೂ ಕೆಲ ಚೆಕ್ ಬ್ಯಾಂಕ್‍ನಿಂದ ಪಾಸಾಗಲಿಲ್ಲ. ಯಾವುದೋ ಒಂದು ವರದಿಯ ಪ್ರಕಾರ ಅತ್ಯಲ್ಪ ಪ್ರಮಾಣದ ಪರಿಹಾರವನ್ನು ಕೊಡಲು ಸರಕಾರ ಮುಂದಾಗಿತ್ತು. ಇದಕ್ಕೆ ರೈತ ಸಂಘ ಒತ್ತಡ ಹಾಕಿ ಕಳೆದ ಬಾರಿ ಕೊಡಗಿನಲ್ಲಿ ಆದ ಪ್ರವಾಹದ ಮಾದರಿಯಲ್ಲಿಯೇ ಪರಿಹಾರವನ್ನು ನೀಡಬೇಕು ಎಂಬ ಒತ್ತಾಯದ ಮೇರೆಗೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದೆ.

ಹಾನಿಗೀಡಾಗಿದ ಪ್ರದೇಶವನ್ನು ಪುನರ್ ನಿರ್ಮಾಣ ಮಾಡುವ ಕೆಲಸವನ್ನು ಸರಕಾರ ಮಾಡಬೇಕು ಮತ್ತು ಯಾವ್ಯಾವ ಬೆಳೆಗಳಿಗೆ ಹಾನಿಯಾಗಿದೆಯೋ ಆಯಾಯ ಬೆಳೆಗಳಿಗೆ ಅನುಗುಣವಾಗಿ ಪರಿಹಾರವನ್ನು ನೀಡಬೇಕು. ಯಾರ್ಯಾರು ಭೂಮಿಯನ್ನು ಕಳೆದುಕೊಂಡಿದ್ದಾರೋ ಅಂತವರಿಗೆ ಸರಕಾರ ಬದಲಿ ಭೂಮಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಕ್ತರಹಳ್ಳಿ ಬೈರೇಗೌಡ, ಲಕ್ಷ್ಮಣ ಸ್ವಾಮಿ, ಅಗ್ನಿ ಶಿವಪ್ಪ, ಉಪಾಧ್ಯಕ್ಷ ನಾಗರಾಜ್, ಜಿಲ್ಲಾಧ್ಯಕ್ಷ ದುಗ್ಗಪ ಗೌಡ, ಕಾರ್ಯದರ್ಶಿ ದಯಾಕರ್, ಜಿಲ್ಲಾ ಸಂಚಾಲಕ ಸವಿಂಜಯ ಜೈನ್, ಜಗದೀಶ್ ಎನ್.ಸಿ.ನಾರಾಯಣ, ವೃಷಭರಾಜ್, ವೆಂಕಟೇಶ್, ರಾಜೇಶ್, ಜಿನರಾಜಯ್ಯ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News