"ಪೊಲೀಸ್ ವೇಷದಲ್ಲಿ ಕೊಪ್ಪಳ ಬಸ್ ನಿಲ್ದಾಣಕ್ಕೆ ಬಾಂಬ್ ಇಡಲು ಬಂದ ಉಗ್ರ": ವೈರಲ್ ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ

Update: 2019-09-20 05:45 GMT

ಕೊಪ್ಪಳ, ಸೆ.19: ಸಾಮಾಜಿಕ ಜಾಲತಾಣದಲ್ಲಿಂದು 'ಕೊಪ್ಪಳ ಬಸ್ ನಿಲ್ದಾಣ ಗೆ ಬಾಂಬ್ ಇಡಲು ಉಗ್ರರು ಬಂದಿದ್ದಾರೆ' ಎಂಬ ಸುದ್ದಿ ಹರಿದಾಡಿದ್ದು, ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ತಲೆಬರಹದಡಿ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಪೊಲೀಸರು ಬಸ್ ನಿಲ್ದಾಣ ಒಳಗಿನ ಕೊಠಡಿಯೊಂದರಿಂದ ಪೊಲೀಸ್ ವಸ್ತ್ರಧಾರಿಯಾಗಿರುವ ವ್ಯಕ್ತಿಯೋರ್ವನ್ನು ಹೊರಕರೆತರುವ ದೃಶ್ಯವಿದೆ. ಕೊಠಡಿಯ ಹೊರ ಭಾಗದಲ್ಲಿ ಸಾರ್ವಜನಿಕರು ಘಟನೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದು, ಪೊಲೀಸ್ ವಸ್ತ್ರಧಾರಿಯಾಗಿರುವ ವ್ಯಕ್ತಿಯನ್ನು ಗನ್ ಪಾಯಿಂಟ್ ಮೂಲಕ ಪೊಲೀಸರು ಹೊರಕ್ಕೆ ಕರೆತರುತ್ತಾರೆ. ಬಳಿಕ ಬಸ್ ಸ್ಟಾಂಡ್ ನಲ್ಲಿ ಆ ವ್ಯಕ್ತಿಯ ದೇಹ ತಪಾಸಣೆ ನಡೆಸಿ ಬಳಿಕ ಜೀಪ್ ಹತ್ತಿಸುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಂಬ್ ಇಡಲು ಬಂದ ಪೊಲೀಸ್ ವೇಷದಾರಿ ಉಗ್ರನನ್ನು ಕೊಪ್ಪಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಹರಡಲಾಗಿತ್ತು.

ಆದರೆ ಈ ವಿಡಿಯೋ ದೃಶ್ಯದ ಬಗ್ಗೆ ಕೊಪ್ಪಳ ಪೊಲೀಸ್ ಅಧೀಕ್ಷಕರು ಸ್ಪಷ್ಟನೆ ನೀಡಿದ್ದು, ವೈರಲ್ ಆದ ವಿಡಿಯೋ ಭಯೋತ್ಪಾದಕ ದಾಳಿಯ ಬಗ್ಗೆ ಅಣಕು ಪ್ರದರ್ಶನದ್ದಾಗಿದ್ದು, ಸಾರ್ವಜನಿಕರು ಭಯಭೀತರಾಗದಂತೆ ಮನವಿ ಮಾಡಿದ್ದಾರೆ. ಭಯೋತ್ಪಾದಕ ದಾಳಿ ಮಾಡಿದರೆ ಯಾವ ರೀತಿ ಪೊಲೀಸರು ಕಾರ್ಯಾಚರಣೆ ನಡೆಸಿಬೇಕೆಂಬ ಬಗ್ಗೆ ಸೆ.18 ರಂದು ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಅಣಕು ಪ್ರದರ್ಶನ (Mock Drill) ನಡೆಸಲಾಗಿದೆ. ಇದು ಕೇವಲ ಅಣಕು ಪ್ರದರ್ಶನ ಮಾತ್ರವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯಭೀತರಾಗದಂತೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News