ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದು ನಿರೀಕ್ಷಿತ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್

Update: 2019-09-19 14:27 GMT

ಬೆಂಗಳೂರು, ಸೆ.19: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿ, ತಿಹಾರ್ ಜೈಲಿಗೆ ಹೋಗಿರುವುದು ನಿರೀಕ್ಷಿತ ಬೆಳವಣಿಗೆ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಪ್ರಕರಣದಲ್ಲಿ ರಾಜಕೀಯ ಉದ್ದೇಶದಿಂದ ಟೀಕೆ ಮಾಡುತ್ತಿವೆ. ಆದರೆ ಕಾನೂನು ಪ್ರಕಾರ ಕ್ರಮ ಎದುರಿಸುವುದು ಎಲ್ಲರಿಗೂ ಅನಿವಾರ್ಯ. ಈ ಹಿಂದೆ ಕಾನೂನು ಪ್ರಕಾರವೇ ಕ್ರಮ ಜರುಗಿಸಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣು ಮುಂದೆ ಇದೆ ಎಂದು ಅವರು ತಿಳಿಸಿದ್ದಾರೆ.

ಆದರೂ, ಆರ್ಥಿಕ ಅಪರಾಧದಂತಹ ಗಂಭೀರ ಪ್ರಕರಣವನ್ನು ರಾಜಕೀಯಕ್ಕೆ ಬಳಸಲು ಕಾಂಗ್ರೆಸ್ ಮುಖಂಡರು ಯತ್ನಿಸಿದ್ದು ದುರಾದೃಷ್ಟಕರ ಸಂಗತಿ. ಜಾತಿಯ ಆಧಾರದ ಮೇಲೆ ಭ್ರಷ್ಟಾಚಾರ ಪ್ರಕರಣವನ್ನು ಗೌಣವನ್ನಾಗಿಸಲು ಕಾಂಗ್ರೆಸ್ ಯತ್ನಿಸಿತು. ಆದರೆ, ಕಾನೂನು ಎಲ್ಲದಕ್ಕಿಂತ ದೊಡ್ಡದು ಎನ್ನುವುದು ಶಿವಕುಮಾರ್ ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಕಾಂಗ್ರೆಸ್ ಮುಖಂಡರು ಪ್ರಧಾನಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ವಿನಾಕಾರಣ ಪ್ರಸ್ತಾಪಿಸಿದ್ದರು. ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಿ ಪ್ರತಿಭಟನೆ ಮೂಲಕ ಕಾನೂನು ಕ್ರಮದಿಂದ ಯಾರೊಬ್ಬರೂ ಬಚಾವಾಗಲು ಸಾಧ್ಯವಿಲ್ಲ. ಅದಕ್ಕೆ ಈ ಪ್ರಕರಣವೇ ನಿದರ್ಶನವಾಗಿದೆ ಎಂದು ನಳೀನ್‌ ಕುಮಾರ್ ಕಟೀಲ್ ಪ್ರತಿಪಾದಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಈಗಲಾದರೂ ಬಿಜೆಪಿ ನಾಯಕರನ್ನು ಟೀಕೆಗೊಳಪಡಿಸುವುದನ್ನು ಬಿಟ್ಟು ವಾಸ್ತವಾಂಶ ಅರಿತು, ಕಾನೂನನ್ನು ಗೌರವಿಸಬೇಕು. ಕಾನೂನಿಗೆ ಗೌರವ ನೀಡುವುದರೊಂದಿಗೆ ಶಿವಕುಮಾರ್ ಕೂಡ ದೊಡ್ಡತನ ಪ್ರದರ್ಶಿಸಲಿ. ಬಿಜೆಪಿ ವಿರುದ್ಧ ಟೀಕೆಗಿಂತ ಕಾನೂನು ಪ್ರಕಾರ ನಿರಪರಾಧಿ ಎಂದು ಸಾಬೀತು ಮಾಡುವುದು ಮುಖ್ಯ ಎನ್ನುವುದನ್ನು ಅವರು ಅರಿಯುವುದು ಒಳ್ಳೆಯದು ಎಂದು ನಳೀನ್‌ಕುಮಾರ್ ಕಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News