ಕಾಚನಹಳ್ಳಿ ದಲಿತರ ಮೇಲೆ ಹಲ್ಲೆ ಪ್ರಕರಣ: ಅಸ್ಪೃಶ್ಯತೆ ತಡೆಗೆ ಎಲ್‌ಐಪಿಎಫ್ ಆಗ್ರಹ

Update: 2019-09-19 16:06 GMT

ಬೆಂಗಳೂರು, ಸೆ.19: ನೆಲಮಂಗಲದ ಕಾಚನಹಳ್ಳಿಯಲ್ಲಿ ಈಗಲೂ ಅಮಾನವೀಯ ಜಾತಿ ಪದ್ಧತಿಗಳು ಮುಂದುವರೆದಿದ್ದು, ಬಿಟ್ಟಿ ಚಾಕ್ರಿ, ತಲೆವಾರಿಕೆ ಹಾಗೂ ಅಸ್ಪೃಶ್ಯತೆ ನಡೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಅಖಿಲ ಭಾರತ ಪ್ರಜಾ ವೇದಿಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸದಸ್ಯ ರಾಮ್‌ದಾಸ್, ಮೇಲ್ವರ್ಗದ ಜನರ ಮನೆಗಳು ಇರುವ ಪ್ರದೇಶದಲ್ಲಿ ಮಾದಿಗರು ಊಟ ತಿನ್ನಬೇಕಾದರೆ ಅವರಿಗೆ ಪ್ರತ್ಯೇಕ ತಟ್ಟೆ ಹಾಗೂ ಲೋಟಗಳನ್ನು ನೀಡಲಾಗುತ್ತದೆ. ಊರಿನ ಯಾವುದೇ ನಳ್ಳಿ ಮುಟ್ಟಿದರೆ ಮೇಲ್ವರ್ಗದವರು ಅದನ್ನು ತೊಳೆಯದೆ ಉಪಯೋಗಿಸುವುದಿಲ್ಲ. ಅಲ್ಲದೆ, ಮಾದಿಗರಿಗೆ ಈಗಲೂ ದೇವಸ್ಥಾನ ಪ್ರವೇಶ ನೀಡದೇ ಇರುವುದು ದೇಶದ ದೊಡ್ಡ ದುರಂತ ಎಂದು ವಿಷಾದಿಸಿದರು.

ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳನ್ನು ರದ್ದು ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳದ ಜಿಲ್ಲಾಡಳಿತವೇ ಈ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು. ಇಂತಹ ಅಮಾನವೀಯ ಪದ್ಧತಿಗಳನ್ನು ಆಚರಿಸುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ರಾಜಿಗೆ ಒತ್ತಾಯಿಸಿ, ಕಾನೂನು ವ್ಯವಸ್ಥೆಯ ಪ್ರಕಾರ ನ್ಯಾಯ ಸಿಗದೆ ಇರುವ ಹಾಗೆ ಮಾಡಲು ಹೊರಟವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇನ್ನು, ಕಾಚನಹಳ್ಳಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಘಟನೆ ಸಂಭವಿಸಿದ್ದ 5 ಗಂಟೆಗಳ ನಂತರ ಅಲ್ಲಿಗೆ ಪೊಲೀಸರು ಭೇಟಿ ನೀಡಿದ್ದರು. ಅಷ್ಟು ಹೊತ್ತಿಗೆ ಆರೋಪಿಗಳು ಪರಾರಿಯಾಗಿದ್ದರು. ಆದರೆ ಸಿಕ್ಕಿಬಿದ್ದ 4 ಜನ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಿದರು. ಅದರಲ್ಲಿ ಸೇರಿಸಬೇಕಾದ ಐಪಿಸಿ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆಗಟ್ಟುವ ಕಾಯ್ದೆಯ ಮುಖ್ಯ ಅಂಶಗಳನ್ನೇ ಸೇರಿಸಿಲ್ಲ. ಹೀಗಾಗಿ, ಡಿಎಸ್‌ಪಿ ಪಾಡುರಂಗರನ್ನು ಭೇಟಿಯಾದಾಗ, ಆ ಹಳ್ಳಿಯಲ್ಲಿ ಯಾವುದೇ ಉದ್ವೇಗಗಳು, ಸಮಸ್ಯೆಗಳು ನಡೆದಿಲ್ಲವೆಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಸಮಾಜ ಕಲ್ಯಾಣ ಅಧಿಕಾರಿಗಳು ಅಲ್ಲಿ ಹೆಚ್ಚು ಜಾತಿ ದೌರ್ಜನ್ಯ ನಡೆಯುತ್ತಿಲ್ಲ ಎಂದು ಹೇಳುತ್ತಾರೆ ಹಾಗೂ ಅವರ ಪ್ರಕಾರ ಬಿಟ್ಟಿ ಚಾಕ್ರಿ ವ್ಯವಸ್ಥೆ ‘ಬಂಧಿತ ಕಾರ್ಮಿಕ’ ಆಗಿ ಪರಿಗಣಿಸಲು ಸಾಧ್ಯವಿಲ್ಲವಂತೆ. ಇನ್ನು, ವಿಧಾನಸಭಾ ಸದಸ್ಯ ಶ್ರೀನಿವಾಸ ಮೂರ್ತಿ ಪ್ರಕಾರ ಈ ಅಪರಾಧಕ್ಕೆ ಕೊಲೆ ಪ್ರಯತ್ನ ಅನ್ವಯ ಆಗುವುದಿಲ್ಲವಂತೆ, ಏಕೆಂದರೆ ಮಾದಿಗರ ಮೇಲೆ ಆದ ಹಿಂಸೆ ಪ್ರಾಣ ಹೋಗುವಷ್ಟು ಆಗಿಲ್ಲವಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಹಿನ್ನೆಲೆ: ವಿದ್ಯಾವಂತ ಮಾದಿಗ ಯುವಕರು ಅಸ್ಪೃಶ್ಯತೆ ವಿರುದ್ಧ ಹೋರಾಟ ಆರಂಭಿಸಿ ತಮಟೆಗಳನ್ನು ಸುಟ್ಟಿದ್ದು, ಇದನ್ನು ತಿಳಿದ ಒಕ್ಕಲಿಗರು ಮಾದಿಗರಿಗೆ ಪ್ರಾಣ ಬೆದರಿಕೆ ನೀಡಿದ್ದರು ಎನ್ನಲಾಗಿದೆ. ಅದೇ ದಿನ ರಾತ್ರಿ 8.30ಕ್ಕೆ ಅಂದಾಜು 50 ಒಕ್ಕಲಿಗ ಸಮುದಾಯದ ಗುಂಪೊಂದು ಮಾದಿಗ ಸಮುದಾಯ ವಾಸಿಸುವ ಪ್ರದೇಶಕ್ಕೆ ಹೋಗಿ, ಕಬ್ಬಿಣದ ರಾಡ್‌ಗಳು ಹಾಗೂ ಮರದ ದೊಣ್ಣೆಗಳಲ್ಲಿ ಮಾದಿಗ ಸಮುದಾಯದ ಗಂಡಸರಿಗೆ ಹೀನಾಯವಾಗಿ ಹೊಡೆದಿದ್ದಾರೆ. ಅಲ್ಲದೆ, ಮಹಿಳೆಯರಿಗೂ ಹೊಡೆದು, ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಬಳಿಕ ಕೆಲ ಪಂಚಾಯತ್ ಸದಸ್ಯರು ಬಂದು ಮಾದಿಗರನ್ನು ರಾಜಿಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಮಾದಿಗ ಸಮುದಾಯ ಒಪ್ಪಿಲ್ಲ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News