ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರೂಪಿಸಿರುವ ಯೋಜನೆಗಳು ಪರಿಣಾಮಕಾರಿ ಜಾರಿಯಾಗಲಿ: ಜಿ.ಎ ಬಾವಾ

Update: 2019-09-19 17:00 GMT

ಕೋಲಾರ, ಸೆ.19: ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಯಾಗಬೇಕು ಎಂದು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ ಬಾವಾ ಸೂಚಿಸಿದರು. 

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವಂತೆ ಅರಿವು ಮೂಡಿಸಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು. 

ಕಡಿಮೆ ಅಂತರದಲ್ಲಿಯೇ 2 ರಿಂದ 3 ಶಾಲೆಗಳಿದ್ದು, ಇವುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಈ ಶಾಲೆಗಳನ್ನು ಒಂದು ಶಾಲೆಯಲ್ಲಿ ವಿಲೀನಗೊಳಿಸಿ, ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಶಿಕ್ಷಕರ ಕೊರತೆಯನ್ನು ನೀಗಿಸಬಹುದಾಗಿದೆ. 10 ಕ್ಕಿಂತ ಕಡಿಮೆ ಇರುವ ಉರ್ದು ಶಾಲೆಗಳಲ್ಲಿ ಒಬ್ಬರೆ ಕನ್ನಡ ಅಥವಾ ಉರ್ದು ಶಿಕ್ಷಕರಿದ್ದು, ಇವರು ಕನ್ನಡ ಮತ್ತು ಉರ್ದು ಭಾಷೆಯನ್ನು ಬೋಧಿಸಲು ಆಗುವುದಿಲ್ಲ. ಆದ್ದರಿಂದ ಉರ್ದು ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಮಕ್ಕಳಿದ್ದರೂ ಪ್ರತ್ಯೇಕ ಕನ್ನಡ ಮತ್ತು ಉರ್ದು ಶಿಕ್ಷಕರನ್ನು ನೇಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರತ್ನಯ್ಯ ಅವರಿಗೆ ಸೂಚಿಸಿದರು. 

ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ 2061 ಅಂಗನವಾಡಿ ಕೇಂದ್ರಗಳಿದ್ದು, ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು  ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಜಾಹೀರಾತು ನೀಡಲಾಗಿದೆ. ಭೇಟಿ ಪಡಾವೋ, ಭೇಟಿ ಬಜಾವೋ ಎಂಬ ಅರಿವು ಕಾರ್ಯಕ್ರಮದ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ಮಾಡದಂತೆ ಜಾಗೃತಿ ಮೂಡಿಸಲಾಗುತ್ತದೆ. ಜಿಲ್ಲೆಯಲ್ಲಿ 165 ಉರ್ದು ಶಾಲೆಗಳಿದ್ದು, 42 ಸಾವಿರ ಮಕ್ಕಳು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದರು. 

ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ 112 ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಶೇ 70 ರಷ್ಟು ಮಕ್ಕಳು ಅಲ್ಪಸಂಖ್ಯಾತರ ಮಕ್ಕಳಿದ್ದಾರೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಅಲ್ಪಸಂಖ್ಯಾತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಕೌಶಲ್ಯ ಯೋಜನೆಯಡಿ ಯುವಕ ಯುವತಿಯರಿಗೆ ತಾಂತ್ರಿಕ ತರಬೇತಿಯನ್ನು ನೀಡಿ ಉದ್ಯೋಗವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. 

ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಮೈಲಾರಪ್ಪ ಅವರು ಮಾತನಾಡಿ, ಒಟ್ಟು 6775 ಅಲ್ಪಸಂಖ್ಯಾತ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. 226 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಪ್ರೋತ್ಸಾಹ ಧನ ನೀಡಲಾಗಿದೆ. 67 ವಿದ್ಯಾರ್ಥಿಗಳಿಗೆ ನರ್ಸಿಂಗ್ ತರಬೇತಿ ನೀಡಲಾಗಿದ್ದು, 150 ವಿದ್ಯಾರ್ಥಿಗಳಿಗೆ ಬಿಎಡ್, ಡಿಎಡ್ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡಲಾಗಿದೆ. ಜಿಲ್ಲೆಯಲ್ಲಿ 6 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಸಭೆಯಲ್ಲಿ ಕೋಲಾರ ಲೋಕಸಭಾ ಸಂಸದರಾದ ಎಸ್. ಮುನಿಸ್ವಾಮಿ, ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿಗಳಾದ ಅನೀಸ್ ಸಿರಾಜ್,  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕ್ರಿಷ್ಣಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರು ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News