ನೂತನ ಮೋಟರ್ ವಾಹನ ಕಾಯ್ದೆಗೆ ವಕೀಲರ ವಿರೋಧ: ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

Update: 2019-09-19 18:03 GMT

ಮಂಡ್ಯ, ಸೆ.19: ಕೇಂದ್ರ ಸರಕಾರವು ಮೋಟರ್ ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ವಕೀಲರು ಗುರುವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು ವಕೀಲರ ಸಂಘದ ಹೋರಾಟಕ್ಕೆ ಬೆಂಬಲವಾಗಿ ನಗರದ ವಕೀಲರೂ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಕಾಯ್ದೆ ತಿದ್ದುಪಡಿ ವಿರೋಧಿಸಿದರು. ಕೇಂದ್ರ ಸರಕಾರ ಮೋಟರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಸಾರ್ವಜನಿಕರು, ಕಕ್ಷಿದಾರರು ಹಾಗು ವಕೀಲರಿಗೆ ತೊಂದರೆಯಾಗಿದೆ. ತಿದ್ದುಪಡಿಯನ್ನು 15 ದಿವಸದೊಳಗೆ ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಇಲ್ಲದಿದ್ದರೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದರು.

ಹಳೆಯ ಕಾಯ್ದೆ 1988ರಲ್ಲಿ ಸಾರ್ವಜನಿಕರಿಗೆ ಅನುಕೂಲವಾದ ಹಲವಾರು ಅಂಶಗಳು ಇದ್ದವು. ಆದರೆ, ಹೊಸ ಕಾಯ್ದೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗುವ ಅಂಶಗಳಿವೆ. ಹಳೆಯ ಕಾಯ್ದೆಯಲ್ಲಿ ಸೆಕ್ಷನ್ 140ರ ಅನ್ವಯ ತಕ್ಷಣದ ಪರಿಹಾರವಾಗಿ ಗಾಯಾಳುವಿಗೆ 25 ಸಾವಿರ ರೂ. ಮತ್ತು ಮಾರಣಾಂತಿಕ, ಗಂಭೀರ ಪ್ರಕರಣಕ್ಕೆ ಮಧ್ಯಂತರ 50 ಸಾವಿರ ರೂ. ಮೊತ್ತ ಒದಗಿಸಲಾಗಿದೆ. ಆದರೆ, ಈ ನಿಬಂಧನೆಯನ್ನು ಈಗ ಅಳಿಸಲಾಗಿದೆ. ಹೊಸ ಕಾಯ್ದೆಯಡಿ ಯಾವುದೇ ತಕ್ಷಣದ ಪರಿಹಾರ ದೊರಕುವುದಿಲ್ಲ. ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆಗೆ ತಕ್ಷಣದ ಪರಿಹಾರ ಮೊತ್ತ ನೀಡಲಾಗುವುದಿಲ್ಲ. ಹಳೇ ಕಾಯ್ದೆಯಲ್ಲಿ ನ್ಯಾಯಾಲಯವು ಆದೇಶಿಸುವ ಯಾವುದೇ ಮೊತ್ತವನ್ನು ವಿಮಾ ಕಂಪನಿಯು ಸಂಪೂರ್ಣ ಮೊತ್ತವನ್ನು ಹಕ್ಕುದಾರನಿಗೆ ಪಾವತಿಸಬೇಕಿತ್ತು. ಹೊಸ ಕಾಯ್ದೆಯಲ್ಲಿ ವಿಮಾ ಕಂಪೆನಿಯ ಪರಿಹಾರ ನೀಡುವ ಹೊಣೆಗಾರಿಕೆಯು ವಾಹನದ ಮಾಲಕರು ಪಾವತಿಸುವ ಪ್ರೀಮಿಯಂ ಮೊತ್ತ ಮತ್ತು ವಾಹನದ ವಿಮೆ ಹೊಣೆಗಾರಿಕೆಯನ್ನು ಅವಲಂಬಿಸುತ್ತದೆ ಎಂದು ಆರೋಪಿಸಿದರು.

ಹೊಸ ಕಾಯ್ದೆಯಲ್ಲಿ ಇನ್ನೂ ಹಲವಾರು ತೊಂದರೆಗಳಿದ್ದು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಸಿ.ಎಲ್.ಶಿವಕುಮಾರ್, ಉಪಾಧ್ಯಕ್ಷ ಕೆ.ಬಿ.ಎಸ್.ಗಿರೀಶ್, ಪ್ರಧಾನ ಕಾರ್ಯದರ್ಶಿ ನವೀನ, ಎಂ.ಎಸ್.ಕುಮಾರ್, ಶೋಭಾ ಎಚ್.ಕೆ., ತಿಮ್ಮೇಗೌಡ, ಸುಮಿತ್ರ, ಎಚ್.ಸವಿತ, ಎಂ.ಕೆ.ರೇವಣ್ಣ, ಗೌರೀಶ್, ಇತರರು ಭಾಗವಹಿಸಿದ್ದರು.

ನಾಗಮಂಗಲದಲ್ಲೂ ಕಾಯ್ದೆ ತಿದ್ದುಪಡಿ ವಿರೋಧಿಸಿ ವಕೀಲರು ಪ್ರತಿಭಟಿಸಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಖಜಾಂಚಿ ಚಿಕ್ಕಸ್ವಾಮಿ, ಶೇಖ್ ಅಹಮದ್, ದೇವಹಳ್ಳಿ ಮಂಜುನಾಥ್, ಮಹದೇವ, ಶಿವಣ್ಣ, ಪ್ರವೀಣ್ ಕುಮಾರ್, ಬಿಂದುಮತಿ, ಧರಣಪ್ಪ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News