ಇವಿಎಂ ನಿಂದ ನಕಲಿ ಪ್ರಜಾಪ್ರಭುತ್ವ ತಾಂಡವವಾಡುತ್ತಿದೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2019-09-19 18:11 GMT

ಮೈಸೂರು,ಸೆ.19: ಇವಿಎಂನಿಂದ ನಕಲಿ ಪ್ರಜಾಪ್ರಭುತ್ವ ತಾಂಡವವಾಡುತ್ತಿದ್ದು, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ಇಲ್ಲ. ಕೆಲವರಿಗೋಸ್ಕರ ಪ್ರಜಾಪ್ರಭುತ್ವ ಇದೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಗಾಂಧಿನಗರದಲ್ಲಿರುವ ಉರಿಲಿಂಗಿ ಪೆದ್ದಿ ಮಠದ ಆವರಣದಲ್ಲಿ ಗುರುವಾರ ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ “ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಇವಿಎಂ ರಹಸ್ಯ ಬಯಲು ಮಾಡುವುದಕ್ಕಾಗಿ ಪರಿವರ್ತನಾ ಯಾತ್ರೆ” ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಇವಿಎಂ ನಿಂದ ನಕಲಿ ಪ್ರಜಾಪ್ರಭುತ್ವ ತಾಂಡವಾಡುತ್ತಿದೆ. ಸಂವಿಧಾನದ ಅಡಿಯಲ್ಲಿ ಬರುವ ಈಡಿ, ಐಟಿ, ಸಿಬಿಐ ದೇಶವನ್ನು ಭದ್ರಪಡಿಸುತ್ತಿಲ್ಲ. ಒಂದು ಪಕ್ಷವನ್ನು ಭದ್ರಪಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ. ದೌರ್ಜನ್ಯ, ಅತ್ಯಾಚಾರ, ಆರ್ಥಿಕ ಕುಸಿತ ಅತ್ಯಂತ ಅಪಾಯದಲ್ಲಿದೆ. ದೇಶ ರಕ್ಷಿಸಬೇಕಾದರೆ ಇವಿಎಂ ಅನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಇವಿಎಂ ನಿಂದ ಸಾಧ್ಯವಿಲ್ಲ. ಹಾಗಾಗಿ ರಾಷ್ಟ್ರಾದ್ಯಂತ ಎಲ್ಲ ಸಂಘಟನೆಗಳೊಡಗೂಡಿ ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಇವಿಎಂ ನಿಂದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರಿವರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ನ.1 ರಂದು ಬೆಂಗಳೂರಿನಲ್ಲಿ 50 ಸಾವಿರ ಜನರ ರ‍್ಯಾಲಿ ನಡೆಸಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್, ಎಪಿಎಂಸಿ ಉಪಾಧ್ಯಕ್ಷ ಜವರಪ್ಪ, ಕೆ.ದೀಪಕ್, ಅಸ್ಗರ್, ಮೌಲಾನ ಸಾಹೇಬ್, ಸಾದಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News