ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ವೇಗ ಹೆಚ್ಚಿಸಿ: ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಸೂಚನೆ

Update: 2019-09-19 18:22 GMT

ತುಮಕೂರು,ಸೆ.19: ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವೇಗವನ್ನು ಹೆಚ್ಚಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ಸಭೆ ನಡೆಸಿ ಮಾತನಾಡಿದ ಅವರು, ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಸಮಗ್ರ ಮಾಹಿತಿ ಪಡೆದರು. ಸ್ಮಾರ್ಟ್ ರಸ್ತೆ ಯೋಜನೆಯಡಿ ನಗರದಲ್ಲಿ ಎಲ್ಲೆಂದರಲ್ಲಿ ಗುಂಡಿಗಳನ್ನು ತೆಗೆಯುತ್ತಿದ್ದೀರಾ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಕೈಗೊಳ್ಳುವ ಮೊದಲು ಕ್ರಿಯಾ ಯೋಜನೆ ರೂಪಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗುಬ್ಬಿ-ಬೆಂಗಳೂರು ಹೆದ್ದಾರಿಯ ರಸ್ತೆ ಕಾಮಗಾರಿ ಮಂದಗತಿಯಾಗಿ ನಡೆಯುತ್ತಿರುವ ಬಗ್ಗೆ ಸಚಿವರು ಪ್ರಶ್ನಿಸಿದಾಗ ಉತ್ತರಿಸಿದ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆದು 4 ತಿಂಗಳು ಕಳೆದರೂ ಗುತ್ತಿಗೆದಾರರು ವಿನಾಕಾರಣ ನೆಪ ಹೇಳುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವಾರು ವಿನೂತನ ಹಾಗೂ ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೈಗೊಂಡಿರುವ ಸ್ಮಾರ್ಟ್ ತರಗತಿ,ಸ್ಮಾರ್ಟ್ ಲೈಬ್ರರಿ ಕಾಮಗಾರಿಗಳನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರಲ್ಲದೆ, ದೇಶದಲ್ಲಿ ಮೊದಲ ಬಾರಿಗೆ ಉಚಿತವಾಗಿ ಮೊಬೈಲ್‍ನಲ್ಲಿಯೇ ಇ-ಪುಸ್ತಕಗಳ ಮಾಹಿತಿಯನ್ನು ಪಡೆಯುವ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಡಾ.ಶಾಲಿನಿ ರಜನೀಶ್ ಅವರು ಸಚಿವರಿಗೆ ಮಾಹಿತಿ ನೀಡಿದರು. 

ಸ್ಮಾರ್ಟ್ ಸಿಟಿ ಯೋಜನೆಯಡಿ 56 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಕಾರ್ಯ ಪ್ರಗತಿ ಬಗ್ಗೆ ಸಚಿವರು ಡಿಹೆಚ್‍ಒ ಡಾ.ಚಂದ್ರಿಕಾ ಅವರಿಂದ ಮಾಹಿತಿ ಪಡೆದರು. ಮಾಹಿತಿ ನೀಡಿದ ಡಿಹೆಚ್‍ಓ ಜಿಲ್ಲಾಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆ ಭೇಟಿ ನೀಡಿ ಜನರ ಮಾಹಿತಿಯನ್ನು ಸಹ ಪಡೆಯಲಾಗುತ್ತಿದೆ ಎಂದು ಅವರು ಸಚಿವರಿಗೆ ಮಾಹಿತಿ ನೀಡಿದರು. 

ಬುಗುಡನಹಳ್ಳಿ ಕೆರೆಯಿಂದ 14 ಎಂಎಲ್‍ಡಿ ಪ್ರಮಾಣದ ನೀರು ಏಕೆ ಖರ್ಚಾಗುತ್ತಿದೆ ಎಂದು ಸಚಿವರು ಪ್ರಶ್ನಿಸಿದಾಗ ಶಾಲಿನಿ ರಜನೀಶ್ ಮಾತನಾಡಿ, ಇನ್ನೆರಡು ದಿನಗಳೊಳಗಾಗಿ ಬುಗುಡನಹಳ್ಳಿ ಕೆರೆಯಿಂದ 14 ಎಂಎಲ್‍ಡಿ ಪ್ರಮಾಣದ ನೀರು ಖರ್ಚಾಗುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಇಂಜಿನಿಯರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ, ಅಮಾನಿಕೆರೆ ಅಭಿವೃದ್ಧಿ, ಹಸಿರೀಕರಣ ಯೋಜನೆ, ಕ್ರೀಡಾ ಸಂಕೀರ್ಣ ಅಭಿವೃದ್ಧಿ, ಮಾರಿಯಮ್ಮ ನಗರದ ಮೂಲಭೂತ ವಸತಿ ಸೌಲಭ್ಯ, ಯುಟಿಲಿಟಿ ಮಾಲ್, ಸ್ಮಾರ್ಟ್ ಲಾಂಜ್ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಟಿಪಿಟಿ ಮೂಲಕ ಸಚಿವರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಮಾತನಾಡಿ,ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಸಚಿವರಿಗೆ ಸಮಗ್ರ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜೆ.ಬಿ ಜ್ಯೋತಿಗಣೇಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪಾಲಿಕೆ ಮೇಯರ್ ಲಲಿತ ರವೀಶ್, ಉಪಮೇಯರ್ ರೂಪಶ್ರೀ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಸೇರಿ ಅನೇಕ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News