ಬಿಜೆಪಿ ಸರಕಾರ ಅವಧಿ ಪೂರ್ಣಗೊಳಿಸಲಿದೆ: ಸಚಿವ ಕೆ.ಎಸ್.ಈಶ್ವರಪ್ಪ

Update: 2019-09-20 13:02 GMT

ಬೆಂಗಳೂರು, ಸೆ. 20: ರಾಜ್ಯದಲ್ಲಿ ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿಯೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಬಿಜೆಪಿ ಸರಕಾರ ನಾಲ್ಕು ವರ್ಷ ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ತನ್ನ ಅವಧಿ ಪೂರ್ಣಗೊಳಿಸಿದ ಬಳಿಕ ಮತ್ತೆ ಬಿಜೆಪಿ ರಾಜ್ಯದಲ್ಲಿ ಬಹುಮತ ಗಳಿಸುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಮಧ್ಯಂತರ ಚುನಾವಣೆಗಳಿಗೆ ಸಂಬಂಧಿಸಿದ ಹಲವು ಮುಖಂಡರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ವಿಧಾನಸಭೆಗೆ ಯಾವಾಗ ಚುನಾವಣೆ ನಡೆದರೂ ಬಿಜೆಯೆ ಬಹುಮತ ಗಳಿಸುವ ಮೂಲಕ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಹೇಳಿದರು.

ಸಿದ್ದು ಕೈವಾಡ: ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ. ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ಮಾಡಿದ ತಪ್ಪು ನಿರ್ಧಾರವನ್ನು ನ್ಯಾಯಾಲಯ ಸರಿಪಡಿಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ರಮೇಶ್‌ ಕುಮಾರ್ ಸ್ಪೀಕರ್ ಆಗಿದ್ದ ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನೇ ತಿರುಚಿ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದರು. ರಮೇಶ್‌ ಕುಮಾರ್ ಅವರು ಅಂಬೇಡ್ಕರ್ ಬಿಟ್ಟರೆ ತಾವೇ ಸಂವಿಧಾನ ತಿಳಿದುಕೊಂಡಿರುವವರಂತೆ ಆಡುತ್ತಿದ್ದಾರೆ. ಕೋರ್ಟ್ ತೀರ್ಪು ಬರಲಿ, ಅವರೇನೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಶಾಸಕರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಸಿದ್ದರಾಮಯ್ಯರ ಕೈವಾಡವಿದೆ. ರಮೇಶ್‌ ಕುಮಾರ್ ಹಾಗೂ ಸಿದ್ದರಾಮಯ್ಯ ಪರಸ್ಪರ ಮಾತನಾಡಿಕೊಂಡೇ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News