ಅಖಂಡ ಬಳ್ಳಾರಿಯನ್ನು ವಿಭಜನೆ ಮಾಡಲು ಬಿಡುವುದಿಲ್ಲ: ಶಾಸಕ ಸೋಮಶೇಖರ್ ರೆಡ್ಡಿ

Update: 2019-09-20 13:08 GMT

ಬಳ್ಳಾರಿ, ಸೆ. 20: ಅಖಂಡ ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಲು ಬಿಡುವುದಿಲ್ಲ. ಹೊಸಪೇಟೆ(ವಿಜಯನಗರ) ಪ್ರತ್ಯೇಕ ಜಿಲ್ಲೆ ಮಾಡಿದರೆ ಇದೊಂದು ತುಘಲಕ್ ದರ್ಬಾರ್ ಆಗುತ್ತದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಆಕ್ಷೇಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಮಾಡುವ ವಿಚಾರ ನಮಗೆ ಒಪ್ಪಿಗೆ ಇಲ್ಲ. ಬಳ್ಳಾರಿ ಜಿಲ್ಲೆಯ ಹೆಸರನ್ನೇ ವಿಜಯನಗರ ಎಂದು ಬದಲಿಸುವುದು ಭಾವನಾತ್ಮಕ ವಿಚಾರ. ಮುಂದೆಯೂ ಅಖಂಡ ಬಳ್ಳಾರಿ ಜಿಲ್ಲೆ ಒಗ್ಗಟ್ಟಾಗಿಯೇ ಇರಬೇಕು ಎಂದು ಪ್ರತಿಪಾದಿಸಿದರು.

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಬಾರದು ಎಂದು ಕೋರಿ ಶೀಘ್ರದಲ್ಲೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇವೆ ಎಂದ ಅವರು ಜಿಲ್ಲೆಯ ವಿಭಜನೆಗೆ ಕೆಲ ಸ್ವಾಮೀಜಿಗಳು ಬೆಂಬಲ ನೀಡಿದ್ದು ಬೇಸರ ಮೂಡಿಸಿದೆ ಎಂದು ಖೇದ ವ್ಯಕ್ತಪಡಿಸಿದರು.

ಸ್ವಾರ್ಥಿಗಳ ನಿಯೋಗ: ಬಳ್ಳಾರಿ ಜಿಲ್ಲೆ ವಿಭಜನೆಗೆ ಮುಖ್ಯಮಂತ್ರಿಗೆ ಮನವಿ ಮಾಡಲು ತೆರಳಿದ್ದ ನಿಯೋಗದಲ್ಲಿದ್ದವರೆಲ್ಲ ಸ್ವಾರ್ಥಿಗಳು. ಯಾರದ್ದೋ ವೈಯಕ್ತಿಕ ಸ್ವಾರ್ಥಕ್ಕೆ ವಿಜಯನಗರ ಜಿಲ್ಲೆ ಮಾಡುತ್ತಿದ್ದಾರೆಂದು ಅನರ್ಹ ಶಾಸಕ ಆನಂದ್ ಸಿಂಗ್ ಹೆಸರು ಹೇಳದೆ ಟೀಕಿಸಿದರು.

ಅಖಂಡ ಬಳ್ಳಾರಿ ಜಿಲ್ಲೆ ನಮ್ಮ ಆಗ್ರಹ. ಬಳ್ಳಾರಿಗೆ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಲಿ. ಬೆಳಗಾವಿಯಲ್ಲಿ 18 ತಾಲೂಕುಗಳಿವೆ. ಅವರಗಿಲ್ಲದ ತೊಂದರೆ ನಮಗೆ ಬಂದಿದೆಯಾ? ಬೆಳಗಾವಿ ಯಾಕೆ ವಿಭಜನೆ ಮಾಡ್ತಿಲ್ಲ? ಎಂದು ಸೋಮಶೇಖರ್ ರೆಡ್ಡಿ ಪ್ರಶ್ನಿಸಿದರು.

ಬಳ್ಳಾರಿ ಜಿಲ್ಲೆಯೇ ಇವರ ಕಣ್ಣಿಗೆ ಕಾಣ್ತಿದೆಯಾ? ಜಿಲ್ಲೆಯ ಯಾವ ನಾಯಕರ ಅಭಿಪ್ರಾಯವನ್ನೂ ಪಡೆದಿಲ್ಲ. ಹೀಗಾಗಿ ತರಾತುರಿಯಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆ ಸರಿಯಲ್ಲ ಎಂದು ಸೋಮಶೇಖರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಅಭಿವೃದ್ಧಿ ಮತ್ತು ಆಡಳಿತದ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆ ಪ್ರತ್ಯೇಕ ಜಿಲ್ಲೆ ರಚನೆ ಮಾಡುವ ಸಿಎಂ ಕ್ರಮ ಸ್ವಾಗತಾರ್ಹ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಬಳ್ಳಾರಿ ಅಭಿವೃದ್ಧಿಯಾಗಿದ್ದನ್ನು ಬಿಟ್ಟರೆ ಇದೀಗ ಯಾವ ರೀತಿಯಲ್ಲೂ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಜಿಲ್ಲೆಯ ವಿಭಜನೆ ಒಳ್ಳೆಯದು’

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News