ಸಂತ್ರಸ್ತರ ಮುತ್ತಿಗೆ ಭೀತಿಯಿಂದ ಅಧಿವೇಶನ ಬೆಂಗಳೂರಿಗೆ ಶಿಫ್ಟ್: ಮಾಜಿ ಸಚಿವ ಎಂ.ಬಿ.ಪಾಟೀಲ್

Update: 2019-09-20 14:14 GMT

ವಿಜಯಪುರ, ಸೆ. 20: ನೆರೆ ಸಂತ್ರಸ್ತರು ಸಂತ್ರಸ್ತರು ಮುತ್ತಿಗೆ ಹಾಕುತ್ತಾರೆಂಬ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಯಬೇಕು. ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಪರಿಹಾರ ರೂಪಿಸಲು ಬೆಳಗಾವಿಯಲ್ಲೇ ಕಲಾಪ ನಡೆಸಬೇಕು ಎಂದು ಆಗ್ರಹಿಸಿದರು.

ಮುಖ್ಯಮತ್ರಿ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದು, ನನ್ನ ಕ್ಷೇತ್ರದ ಅನುದಾನವನ್ನೂ ತಡೆಹಿಡಿದಿದ್ದಾರೆ. ಈಗಿನ ಸರಕಾರಕ್ಕೆ ಗೊತ್ತು, ಗುರಿ ಏನೂ ಇಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇದಕ್ಕಿಂತ ನೂರು ಪಟ್ಟು ಚೆನ್ನಾಗಿತ್ತು ಎಂದು ಅವರು ಇದೇ ವೇಳೆ ಹೇಳಿದರು.

ಪೊಲೀಸ್ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ವರದಿಯ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗಿದೆ. ಕಾರಾಗೃಹ ಮತ್ತು ಅಗ್ನಿಶಾಮಕ ಸಿಬ್ಬಂದಿ ಎಲ್ಲರನ್ನೂ ಸೇರಿಸಿ ವರದಿಯನ್ನು ಜಾರಿಗೊಳಿಸಲಾಗುವುದು ಎಂದು ಸರಕಾರ ಹೇಳಿದೆ, ಏನು ಮಾಡಲಿದೆ ಎಂದು ನೋಡೋಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News