ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ವಿಫಲ: ಜಗದೀಶ್‌ ಶೆಟ್ಟರ್ ಕಾರಿಗೆ ಮುತ್ತಿಗೆ ಹಾಕಿದ ರೈತರು

Update: 2019-09-20 14:23 GMT

ಬೆಳಗಾವಿ, ಸೆ.20: ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ನಡೆದ ನೆರೆ ಸಂತ್ರಸ್ತರ ಪರಿಶೀಲನಾ ಸಭೆಯಲ್ಲಿ, ಹೆಚ್ಚು ಹಾನಿಗೆ ಒಳಗಾಗಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸಂತ್ರಸ್ತರಿಗೆ ನೆರವಾಗಲು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ಆದರೆ, ಇದಕ್ಕೆ ಸಚಿವ ಜಗದೀಶ್‌ ಶೆಟ್ಟರ್‌ ರಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲವೆಂದು ಆರೋಪಿಸಿದ ರೈತರು, ಸಭೆಯ ಬಳಿಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಶೇಮ್... ಶೇಮ್... ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ರೈತ ಮುಖಂಡ ಪ್ರಕಾಶ್ ನಾಯಕ್ ಸಚಿವರ ಕಾರಿಗೆ ಅಡ್ಡಲಾಗಿ ಮಲಗಿ, ನೆರೆ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವಲ್ಲಿ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ನೆರೆ ಸಂತ್ರಸ್ತರಿಗೆ ಸೂಕ್ತ ಭರವಸೆ ಕೊಡುವವರೆಗೆ ಸಚಿವರನ್ನು ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಸಚಿವರ ಕಾರಿಗೆ ದಾರಿ ಮಾಡಿಕೊಟ್ಟರು.

ಬೆಳಗಾವಿಯಲ್ಲೇ ಅಧಿವೇಶನ ನಡೆಸಿ: ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಬೇಕು. ಸಂತ್ರಸ್ತರಿಗೆ ತಲುಪಿರುವ ಪರಿಹಾರ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಶಾಶ್ವತ ಪುನರ್ ವಸತಿ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕು. ಇಲ್ಲಿ ಅಧಿವೇಶನ ನಡೆಸಿದರೆ ಮಂತ್ರಿಗಳು ಪ್ರವಾಹ ಬಾಧಿತ ಸ್ಥಳಗಳಿಗೆ ತೆರಳಿ ವಾಸ್ತವ ಅರಿಯಬಹುದು ಎಂದು ಮುಖಂಡ ಸಿದಗೌಡ ಮೋದಗಿ ಒತ್ತಾಯಿಸಿದರು.

ರೈತ ಮಹಿಳೆಯ ಕಣ್ಣೀರು

ಸಂತ್ರಸ್ತರಿಗೆ ನೆರವಾಗಲು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು. ಆದರೆ, ಇದಕ್ಕೆ ಸಚಿವರು ಸ್ಪಂದಿಸಲಿಲ್ಲ. ಹೀಗಾಗಿ, ಸಚಿವರಿಗೆ ಮುತ್ತಿಗೆ ಹಾಕಲು ಬರುತ್ತಿದ್ದ ನನ್ನನ್ನು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ತಡೆದು ಎಳೆದಾಡಿದರು. ಸೀರೆಯನ್ನು ಹರಿದು ದೌರ್ಜನ್ಯ ಎಸಗಿದರು ಎಂದು ಜಯಶ್ರೀ ಗುರಣ್ಣವರ ಮಾಧ್ಯಮದವರ ಎದುರು ಕಣ್ಣೀರು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News