ನೆರೆ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ: ಸಂಸದ ತೇಜಸ್ವಿ ಸೂರ್ಯ

Update: 2019-09-20 14:29 GMT

ಬೆಳಗಾವಿ, ಸೆ.20: ಕೇಂದ್ರ ಸರಕಾರವು 14ನೇ ಹಣಕಾಸು ಆಯೋಗದ ಯೋಜನೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಿದೆ. ಆದುದರಿಂದ, ಪ್ರವಾಹದಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವಂತೆ ಮಾಡಿದ್ದಾರೆ. ಅತಿವೃಷ್ಟಿಯ ಸಂದರ್ಭದಲ್ಲಿ ರಾಜ್ಯ ಸರಕಾರಗಳು ಕೇಂದ್ರದ ಮೇಲೆ ಅವಲಂಬಿತರಾಗಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದರು.

ನಮ್ಮ ರಾಜ್ಯ ಸರಕಾರ ಆರ್ಥಿಕವಾಗಿ ಸದೃಢವಾಗಿದೆ. ಆದುದರಿಂದ, ಉತ್ತರ ಕರ್ನಾಟಕ ಭಾಗದ ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರದಿಂದಲೇ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಓಡಾಡಿ, ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ನೆರೆ ಸಂತ್ರಸ್ತರ ರಕ್ಷಣೆಗೆ ಬಂದಿದ್ದ ಎನ್‌ಡಿಆರ್‌ಎಫ್, ಸೇನೆ ಕೇಂದ್ರ ಸರಕಾರದ ಅಧೀನದಲ್ಲಿರುವಂತಹದ್ದು. ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರಕಾರದ ಪ್ರತಿನಿಧಿಗಳು. ರಾಜ್ಯದಲ್ಲಿ ನೆರೆ ಪರಿಸ್ಥಿತಿಗೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ವಿಪಕ್ಷಗಳ ಆರೋಪ ಅರ್ಥಹೀನ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News