ಸಿಬಿಐ ಅಲ್ಲ, ಅವರಪ್ಪನ ಕರೆಸಿ ತನಿಖೆ ಮಾಡಿಸಿದರೂ ಹೆದರಿ ಓಡಿ ಹೋಗಲ್ಲ: ಬಿಎಸ್‌ವೈ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Update: 2019-09-20 16:02 GMT

ಮೈಸೂರು, ಸೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದು, ಸಿಬಿಐ ಅಲ್ಲ ಅವರಪ್ಪನ ಕರೆಸಿ ತನಿಖೆ ಮಾಡಿಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜೆಡಿಎಸ್ ಪಕ್ಷ ಬಲಪಡಿಸುವ ಹಿನ್ನಲೆಯಲ್ಲಿ ಶನಿವಾರ ಮೈಸೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿಎಂ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ಕೆಲವು ಪ್ರಕರಣಗಳನ್ನು ಸಿಬಿಐಗೆ ಕೊಟ್ಟರು. ಸಿಬಿಐ ಅಲ್ಲ ಅವರಪ್ಪನ ಕರೆಸಿ ತನಿಖೆ ಮಾಡಿಸಲಿ. ನಾನೇನು ಹೆದರಿ ಓಡಿ ಹೋಗುವುದಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಸರಕಾರದ ಯೋಜನೆಗಳಿಗೆ ಸಿಎಂ ಯಡಿಯೂರಪ್ಪ ಕೊಡಲಿಪೆಟ್ಟು ಕೊಟ್ಟಿದ್ದು, ನಾವು ಕೊಟ್ಟ ಅನುದಾನವನ್ನು ಸ್ಥಗಿತಗೊಳಿಸಿದ್ದಾರೆ. ಇದೇನು ಯಡಿಯೂರಪ್ಪನ ಮನೆ ದುಡ್ಡೇ ? ಅಥವಾ ಬಿಜೆಪಿ ಪಕ್ಷದ ದುಡ್ಡೇ ಎಂದು ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಶಾಸಕರಿಗೆ ಪಕ್ಷಾತೀತವಾಗಿ ಅನುದಾನ ನೀಡಿದ್ದೇನೆ. ಆದರೆ ಯಡಿಯೂರಪ್ಪ ಧ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಅವದಿಯಲ್ಲಿ ಜಾರಿಗೆ ತಂದ ಬಡವರ ಬಂಧು, ಋಣಮುಕ್ತ ಕಾಯಿದೆಯನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದ ಅವರು, 17 ಅನರ್ಹ ಶಾಸಕರನ್ನು ಇಟ್ಟುಕೊಂಡು ರಚನೆ ಆಗಿರುವ ಬಿ‌.ಎಸ್.ಯಡಿಯೂರಪ್ಪ ಸರಕಾರ ಕೂಡ ಸಮ್ಮಿಶ್ರ ಸರಕಾರನೆ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News