ಯಡಿಯೂರಪ್ಪ ಶೀಘ್ರವೇ ಅಧಿಕಾರ ಕಳೆದುಕೊಳ್ಳಲಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-09-21 13:22 GMT

ಬೆಂಗಳೂರು, ಸೆ. 21: ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸನ್ನದ್ದವಾಗಿದ್ದು, ಚುನಾವಣೆಯನ್ನು ಎದುರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಬೃಹತ್ ರ‍್ಯಾಲಿ ಹಾಗೂ ಸಮಾವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಶೀಘ್ರವೇ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಕಾಕತಾಳೀಯ ಎಂಬಂತೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ ಎಂದು ಇದೇ ವೇಳೆ ತಿಳಿಸಿದರು.

ರಾಜಕೀಯಕ್ಕೆ ನಾಲಾಯಕ್ಕು: ಎಂಟಿಬಿ ನಾಗರಾಜ್ ಅವರಂತಹ ವ್ಯಕ್ತಿಗಳು ರಾಜಕೀಯದಲ್ಲಿ ಇರಲಿಕ್ಕೆ ನಾಲಾಯಕ್ಕು. ಎದೆ ಬಗೆದರೆ ನಾನೇ ಇದ್ದೀನಿ ಅನ್ನುತ್ತಿದ್ದ. ಅದು ನಿಜ ಅಂದುಕೊಂಡಿದ್ದೆ. ಆದರೆ, ಆ ನಂತರ ಆತನ ನಿಜಬಣ್ಣ ಬಯಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಚರ್ಚೆ ಮಾಡಿದ ವೇಳೆ ಆಣೆ, ಪ್ರಮಾಣ ಮಾಡಿ ಪಕ್ಷಕ್ಕೆ ದ್ರೋಹ ಮಾಡಿ ಎಂಟಿಬಿ ನಾಗರಾಜ್ ಮುಂಬೈಗೆ ಹಾರಿದ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಹೊಸಕೋಟೆ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ ವ್ಯಕ್ತಿಯನ್ನು ಕ್ಷೇತ್ರದ ಜನತೆ ಗೆಲ್ಲಿಸಬಾರದು ಎಂದು ಮನವಿ ಮಾಡಿದರು.

ಅನರ್ಹ ಶಾಸಕರ ಅರ್ಜಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಕೋರ್ಟ್‌ನಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ. ಹೊಸಕೋಟೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದ ಸಿದ್ದರಾಮಯ್ಯ, ಸಂವಿಧಾನದ ಅನ್ವಯ ತೀರ್ಪು ನೀಡಿದ ರಮೇಶ್‌ ಕುಮಾರ್ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ನಾಗರಹಾವೇ..?: ಎಂಟಿಬಿ ನಾಗರಾಜ್ ಅಂದ್ರೆ ಏನು ನಾಗರಹಾವೇ. ಆತ ತನ್ನ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ನೃತ್ಯ ಮಾಡುತ್ತಾನೆ. ಆತನಲ್ಲಿ ವಿಷವಿದೆ ಎಂದು ಗೊತ್ತಾಗುತ್ತದೆ. ಕ್ಷೇತ್ರದ ಜನರ ಪಾಲಿಗೆ ಈಗ ವಿಷವೇ ಆಗಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

‘ಅಧಿಕಾರ ದಾಹಕ್ಕಾಗಿ ಎಂಟಿಬಿ ನಾಗರಾಜ್ ತಮ್ಮನ್ನು ತಾವು ಮಾರಾಟ ಮಾಡಿಕೊಂಡಿದ್ದಾರೆ. ಹೊಸಕೋಟೆ ಜನತೆ ಅವರನ್ನು ಕಾಂಗ್ರೆಸ್ ಪಕ್ಷದ ಚಿನ್ಹೆ ಮೇಲೆ ಗೆಲ್ಲಿಸಿದ್ದಾರೆಂಬುದನ್ನು ಮರೆತಿದ್ದಾರೆ. ಇದೀಗ ಕ್ಷೇತ್ರದ ಜನತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಎಂಟಿಬಿ ದ್ರೋಹ ಮಾಡಿದ್ದಾರೆ’

-ಕೃಷ್ಣಬೈರೇಗೌಡ ಮಾಜಿ ಸಚಿವ

‘ಎಂಟಿಬಿ ನಾಗರಾಜ್ ಸ್ಪರ್ಧೆ ಇನ್ನೂ ಖಚಿತಗೊಂಡಿಲ್ಲ. ಅವರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅವರೇ ಸ್ಪರ್ಧಿಸಲಿ ಅಥವಾ ಅವರ ಪರವಾಗಿ ಯಾರಾದರೂ ಸ್ಪರ್ಧಿಸಲಿ, ಹೊಸಕೋಟೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕ್ಷೇತ್ರದ ಜನರ ಸ್ವಾಭಿಮಾನ ಎತ್ತಿಹಿಡಿಯಿರಿ ಎಂದು ವಿನಂತಿಸುತ್ತೇನೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News