ಬಿಜೆಪಿ ಪಾಪದ ಹಣದಲ್ಲಿ ಅಧಿಕಾರಕ್ಕೆ ಬಂದಿದೆ: ಮಾಜಿ ಸಿಎಂ ಕುಮಾರಸ್ವಾಮಿ

Update: 2019-09-21 16:30 GMT

ಮೈಸೂರು,ಸೆ.21: ಉಪ ಚುನಾವಣೆಯಲ್ಲಿ ಜನರು ಬಿಜೆಪಿ ವಿರುದ್ಧವಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದುವರಿಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಮುಂದುವರೆಯಲು ಸಾಧ್ಯವಿಲ್ಲ. ಇದರ ಸಂಖ್ಯೆ ನೋಡಿದರೆ ಗೊತ್ತಾಗುತ್ತೆ. ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಜೆಡಿಎಸ್ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರ ಬೀಳುತ್ತೆ. ನಾನು ಕೋಡಿ ಮಠದ ಸ್ವಾಮಿ ಭವಿಷ್ಯದಂತೆ ಹೇಳುತ್ತಿಲ್ಲ. ಬಿಜೆಪಿ ಪಾಪದ ಹಣದಿಂದ ಅಧಿಕಾರಕ್ಕೆ ಬಂದಿದೆ. ಪ್ರಸ್ತುತದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಆಧಾರದ ಮೇಲೆ ಹೇಳುತ್ತಿದ್ದೇನೆ. ಈ ರಾಜ್ಯದ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಈ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದರು.

ಬೆಳಗಾವಿಯಲ್ಲಿ ಜಗದೀಶ್ ಶಟ್ಟರ್ ವಿರುದ್ಧ ಜನರು ಘೇರಾವ್  ಮಾಡಿದ್ದಾರೆ. ಜನರು ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಅವರನ್ನು ಅಧಿಕಾರಿಗಳು ರಕ್ಷಣೆ ಕೊಟ್ಟು ಹೊರಗೆ ಕರೆದುಕೊಂಡು ಬಂದಿದ್ದಾರೆ. ಬೆಳಗಾವಿ ಬಿಜೆಪಿಗೆ ಹೆಚ್ಚು ಬೆಂಬಲ ಇರುವ ಕಡೆ ಜನರು ತಿರುಗಿ ಬಿದ್ದಿದ್ದಾರೆ. ಇದೆಲ್ಲವನ್ನು ನೋಡಿದರೆ ಉಪಚುನಾವಣೆ ಫಲಿತಾಂಶ ಹೇಗೆ ಬರಬಹುದು ಅಂತ ನಿರೀಕ್ಷೆ ಮಾಡಬಹುದು ಎಂದಿದ್ದಾರೆ.

175 ಕ್ಷೇತ್ರಗಳಲ್ಲಿ ಗೆಲ್ಲುವ ಪಣ ತೊಟ್ಟಿದ್ದೇವೆ. 15 ವಿಧಾನ ಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ಕ್ಕೆ ಉಪಚುನಾವಣೆ ನಡೆಯಲಿದೆ. 15 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸಲು ದೇವೇಗೌಡರು ರೂಪುರೇಷೆ ಸಿದ್ಧಪಡಿಸಿದ್ದಾರೆ. 15 ರಲ್ಲಿ ಕನಿಷ್ಠ 10 ಸ್ಥಾನಗಳನ್ನು ನಾವು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದೇವೆ. ನಾನು ಮೈಸೂರು ಭಾಗದ ಶಾಸಕರಿಗೆ ಮನವಿ ಮಾಡಿದ್ದೇನೆ. ಹುಣಸೂರಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕು. ಹುಣಸೂರು ಕ್ಷೇತ್ರದಲ್ಲಿ ಆದ ರಾಜಕೀಯ ಬದಲಾವಣೆಗಳನ್ನ ಗಮನಸಿದ್ದೇವೆ. ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲಲು ನಾನು ನಿಮ್ಮೊಂದಿಗೆ ಇದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ನನಗೆ ಬಹಳ ಪ್ರೀತಿ ತೋರಿಸಿದ್ದರಿ. ಈ ಬಾರಿಯೂ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ ಎಂದು ಮನವಿ ಮಾಡಿದರು.

ನಾನು ಮುಖ್ಯಮಂತ್ರಿ ಆದಾಗ ಕಣ್ಣಲ್ಲಿ ನೀರು ಹಾಕಿದೆ. ಅಧಿಕಾರ ಬಿಟ್ಟಾಗ ನಾನು ಸಂತೋಷದಿಂದ ಬಂದೆ. ನಾನು ಕಣ್ಣೀರು ಹಾಕಲು ಕಾರಣ ಕಾಂಗ್ರೆಸ್. ಜತೆ ಅಧಿಕಾರ ಹಿಡಿದಾಗ ನನ್ನ ಕಾರ್ಯಕರ್ತರಿಗೆ ದೂರವಾಗಿದ್ದೆ. ನಾನು ಚುನಾವಣೆಗೂ ಮುನ್ನ ಸಾಲಮನ್ನಾ ಮಾಡ್ತಿನಿ ಅಂದಾಗ, ಅಧಿಕಾರಕ್ಕೆ ಬರಲ್ಲ ಇನ್ನು ಸಾಲಾ ಮನ್ನಾ ಎಲ್ಲಿ ಮಾಡ್ತಾರೆ ಅಂತ ಹೇಳಿದರು. ಆದರೆ ನನಗೆ ದೊಡ್ಡ ಮಟ್ಟದ ಬೆಂಬಲ ಇಲ್ಲದಿದ್ದರೂ ಉತ್ತಮ ಆಡಳಿತ ಕೊಟ್ಟಿದ್ದೇನೆ. ಸದ್ಯ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ನನಗೇನೂ ವೈಯುಕ್ತಿಕವಾಗಿ ಇಷ್ಟವಿಲ್ಲ. ಈಗಾಗಲೇ ರಾಜ್ಯದ ಕಾಂಗ್ರೆಸ್ ನಾಯಕರು ಹೊಂದಾಣಿಕೆ ಬೇಕಿಲ್ಲ ಅಂತ ಹೈಕಮಾಂಡ್ ಗೆ ತಿಳಿಸಿದ್ದಾರೆ. ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಕೆಲವರಿಗೆ ಜೆಡಿಎಸ್, ಕಾಂಗ್ರೆಸ್ ಹೊಂದಾಣಿಕೆ ಬೇಕಿದೆ. ಆದರೆ ರಾಜ್ಯದ ಕೆಲ ನಾಯಕರಿಗೆ ಹೊಂದಾಣಿಕೆ ಬೇಡ ಅನ್ನುವ ಭಾವನೆ ಇದೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ನಾವು ಮೈತ್ರಿ ಮಾಡಿಕೊಂಡು ಯಾವ ಪಕ್ಷವನ್ನು ಎದುರಿಸಿಕೊಂಡು ಬಂದಿದ್ದೇವೋ, ಆ ಪಕ್ಷದಿಂದ ಆಡಳಿತಕ್ಕೆ ಒಳಪಟ್ಟಿದ್ದೇವೆ. ನನಗೆ ಹಲವು ನೋವುಗಳಿದ್ದರೂ 14 ತಿಂಗಳು ಮುಖ್ಯಮಂತ್ರಿ ಆಗಿದ್ದೆ. ಸಾಲ ಮನ್ನಾ ಯೋಜನೆಯಂತಹ ಅನೇಕ ಯೋಜನೆಗಳನ್ನ ತಂದಿದ್ದೇನೆ. ನಾನು ತಂದ ಜನಪರ ಯೋಜನೆಗಳಿಂದ ನನಗೆ ಸರಿಯಾದ ಪ್ರಚಾರ ಸಿಕ್ಕಿಲ್ಲ. ಮೈಸೂರು ಜಿಲ್ಲೆಯಲ್ಲಿ ಪಕ್ಷದ ಒಂದಷ್ಟು ಗೊಂದಲಗಳಿವೆ. ಬೇರೆ ಪಕ್ಷಗಳು ಮಾಡಿರುವ ಚಿತಾವಣೆಗೆ ಸೃಷ್ಟಿಯಾಗಿರುವ ಗೊಂದಲಗಳ ನಿವಾರಣೆಗೆ ನಾನು ಮಾಡಿರುವ ಜನರ ಯೋಜನೆಗಳ ಮಾಹಿತಿ ಸಂಗ್ರಹಿಸಿ ಪುಸ್ತಕ ಸಿದ್ಧಪಡಿಸಿದ್ದೇನೆ ಎಂದು ಹೇಳಿದರು.

ಸಾಲಾ ಮನ್ನಾ ವಿಚಾರದಲ್ಲಿ ಕೆಲವರು ಕುಮಾರಸ್ವಾಮಿ ಜನರಿಗೆ ಟೋಪಿ ಹಾಕಿದ ಎಂದು ಹೇಳುತ್ತಾರೆ. ಹುಣಸೂರು ಕ್ಷೇತ್ರದಲ್ಲಿ ಒಟ್ಟು 11626 ಕುಟುಂಬಗಳ ಸಾಲ ಮನ್ನಾ ಆಗಿದೆ. ನನಗ ಬೆಂಬಲ ಇಲ್ಲದಿದ್ದರೂ ಉತ್ತಮ ಯೋಜನೆಗಳು ತಂದಿದ್ದೇನೆ. ನಾನು ಕಳೆದ ಬಾರಿ ನೆರೆ ಬಂದಾಗ ಎಷ್ಟು ಹಣ ಕೊಟ್ಟಿದ್ದೇನೆ ಅಂತ ನಿಮಗೆ ಗೊತ್ತಿದೆ. ಈಗ ಕೊಡಗಿನಲ್ಲಿ ನೆರೆ ಬಂದು ಜನ ಕಂಗಾಲಾಗಿದ್ದಾರೆ. ಅಲ್ಲಿ ಕ್ಲೀನ್ ಮಾಡೋ ಬದಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಲ್ಲಿ ಕಸ ಗುಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಒಂದು ದಂಧೆ ಮಾಡಿಕೊಂಡಿದೆ. ಅಮೇರಿಕಾಕ್ಕೆ ಪ್ರಧಾನಿ ಹೋಗಿರೋದು ಬಂಡವಾಳ ಉಡಿಕೆದಾರರನ್ನು ಕರೆತರಲಿಕ್ಕಲ್ಲ. ಮುಂದಿನ ವರ್ಷ ಅಮೇರಿಕಾ ಅಧ್ಯಕ್ಷ ಚುನಾವಣೆ ಇದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇದ್ದಾರೆ. ಹೀಗಾಗಿ ಮೋದಿ ಬಗ್ಗೆ ವಿಶೇಷ ಅಭಿಮಾನ ತೋರಿಸಿ ಅವರನ್ನು ಕರೆಸಿಕೊಂಡಿದ್ದಾರೆ. ಪ್ರಧಾನಿ ಪ್ರವಾಸಕ್ಕೆ ಎರಡು ಲಕ್ಷ ಕೋಟಿ ಖರ್ಚು ಮಾಡ್ತಿದ್ದಾರೆ. ಇಲ್ಲಿ ಜನರು ಬೀದಿಯಲ್ಲಿ ಬಿದ್ದರೆ ಒಂದು ಬಿಡಿಗಾಸು ಕೊಡ್ತಿಲ್ಲ. ರಷ್ಯಾಗೆ 7 ಸಾವಿರ ಕೋಟಿ ರೂಪಾಯಿ ಕೊಟ್ಟು ಬರ್ತಾರೆ. ಇದೇ ವಿಚಾರವನ್ನು ಉಪ ಚುನಾವಣೆ ಪ್ರಚಾರಕ್ಕೆ ಬಳಸುತ್ತೇನೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News