ನೆರೆ ಪರಿಹಾರ ನೀಡದ ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Update: 2019-09-21 16:36 GMT

ಮೈಸೂರು,ಸೆ.21: ಪ್ರವಾಹ ಪೀಡಿತ ಜನರಿಗೆ ನೆರೆ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಕಛೇರಿಯಿಂದ ಲಷ್ಕರ್ ಪೊಲೀಸ್ ಠಾಣೆಯ ಬಳಿ ಇರುವ ಅಂಚೆ ಕಚೇರಿಯವರೆಗೆ ರ್ಯಾಲಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಅನೀತಿಯಿಂದ ಅಧಿಕಾರ ಗದ್ದುಗೆ ಏರಿರುವ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಉಂಟಾಗಿರುವ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದೆ. ಅಪರೇಷನ್ ಕಮಲ ಮೂಲಕ ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿ ಅನೀತಿಯಿಂದ ಯಡಿಯೂರಪ್ಪ ಅವರು ಅಧಿಕಾರ ಹಿಡಿದಿದ್ದಾರೆ. ಆದರೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿ ಸರ್ಕಾರದ ಇಂತಹ ವಿಫಲತೆಯನ್ನು ಜನರಿಗೆ ತಿಳಿಸಿ ಹೇಳಬೇಕಿದೆ ಎಂದರು.

ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದೆ. ಆದರೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ವಿಫಲವಾಗಿದೆ. ಪ್ರವಾಹ ಪೀಡಿತರಿಗೆ ನೆರೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ಇದರಿಂದ ರಾಜ್ಯ, ದೇಶದ ಅಭಿವೃದ್ಧಿ ಮೂಲೆಗುಂಪಾಗಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News