ಚುನಾವಣೆಯಲ್ಲಿ ಸೋತಾಗ ಅಧಿಕಾರ ತ್ಯಾಗ ಮಾಡಬಹುದಿತ್ತಲ್ಲವೆ?: ಮಾಜಿ ಸಿಎಂಗೆ ಜಿ.ಟಿ.ದೇವೇಗೌಡ ಪ್ರಶ್ನೆ

Update: 2019-09-21 16:52 GMT

ಮೈಸೂರು,ಸೆ.21: ಲೋಕಸಭಾ ಚುನಾವಣೆಯಲ್ಲಿ ಸೋತು ಮನೇಲಿ ಕುಳಿತುಕೊಂಡಾಗ ಆಧಿಕಾರ ತ್ಯಾಗ ಮಾಡಬಹುದಿತ್ತಲ್ಲವೇ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾಣೆಯಲ್ಲಿ ಸೋತಾಗ ಅಧಿಕಾರ ತ್ಯಾಗ ಮಾಡಬಹುದಿತ್ತು, ನೀವು ರಾಜೀನಾಮೆ ನೀಡಿ ಕಾಂಗ್ರೆಸ್ ನವರನ್ನು ಮುಖ್ಯಮಂತ್ರಿ ಮಾಡಿ, ಎಚ್.ಡಿ.ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು ಅಲ್ಲವೆ? ಆಗ ಸರಕಾರವೂ ಉಳಿಯುತ್ತಿತ್ತು. ಕಾರ್ಯಕರ್ತರೂ ಉಳಿಯುತ್ತಿದ್ದರು ಅಲ್ಲವೆ ಎಂದು ಪ್ರಶ್ನಿಸಿದರು.

'ನೀವು ಮುಖ್ಯಮಂತ್ರಿ ಆಗಿದ್ದಾಗ ಮಂತ್ರಿಗಳು ನಿಮ್ಮನ್ನು ಭೇಟಿ ಮಾಡಬೇಕಾದರೆ ಹೋಟೆಲ್ ಗೇಟ್ ಬಳಿ ಕಾಯಬೇಕಿತ್ತು. ಇದೆಲ್ಲ ಮರೆತು ಹೋಗಿದಿಯಾ ಕುಮಾರಣ್ಣ, ನನಗೆ ವಿಶ್ರಾಂತಿ ಬೇಕು ಅಂತೀರಲ್ಲ ಅಮೇರಿಕಾಕ್ಕೆ ಹೋಗಿದ್ದು ನಾನಾ, ನೀವಾ ? ನೀವು ಎರಡು ಬಾರಿ ಅಮೇರಿಕಾಕ್ಕೆ ಹೋಗಿದ್ದರಲ್ಲ. ಆವಾಗ ನನ್ನ ಕರೆದುಕೊಂಡು ಹೋಗಿದ್ದೀರಾ ? ನೀವು ಕರೆದುಕೊಂಡು ಹೋಗಿದ್ದು ಸಾ.ರಾ.ಮಹೇಶ್‍ ಅನ್ನು. ಅದಕ್ಕೆ ನನ್ನ ಕ್ಷೇತ್ರದ ಜನರ ಜೊತೆ ವಿಶ್ರಾಂತಿ ಪಡೆಯುತ್ತಿದ್ದೇನೆ.  ಕ್ಷೇತ್ರದ ಜನರ ಜೊತೆ ಇರೋದೆ ನನಗೆ ಸಿಗುವ ವಿಶ್ರಾಂತಿ ಎಂದು ಹೇಳಿದರು.

ಹುಣಸೂರು ಕ್ಷೇತ್ರದ ಉಪಚುನಾಣೆ ದಿನಾಂಕ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಪಚುನಾಣೆಯ ಬಗ್ಗೆ ನಮ್ಮ ಕುಟುಂಬಕ್ಕೆ ಚಿಂತೆಯೇ ಇಲ್ಲ. ನನ್ನ ಮಗ ಹುಣಸೂರಿನಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಕ್ಕೆ ಜಿ.ಟಿ.ದೇವೇಗೌಡರನ್ನು ಮುಖ್ಯಮಂತ್ರಿ ಮಾಡಬೇಕಿತ್ತಾ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಜಿ.ಟಿ.ದೇವೇಗೌಡ, ಸ್ವತಃ ತಮ್ಮ ಸಹೋದರ ಎಚ್.ಡಿ.ರೇವಣ್ಣ ಅವರನ್ನೇ ಉಪಮುಖ್ಯಮಂತ್ರಿ ಮಾಡಲಿಲ್ಲ ಇನ್ನು ನನ್ನ ಮಾಡುತ್ತಾರಾ ? ಚಾಮುಂಡೇಶ್ವರಿ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿಗೆ ಸಮಾನವಾದ ಸ್ಥಾನಮಾನ ನೀಡುತ್ತೇನೆ, ಜಿ.ಟಿ.ದೇವೇಗೌಡರನ್ನು ಗೆಲ್ಲಿಸಿ ಎಂದು ಹೇಳಿದ್ದೀರಿ. ಮೈತ್ರಿ ಸರಕಾರ ರಚನೆ ಆದ ಮೇಲೆ ನೀವು ನನಗೆ ಗೃಹ ಖಾತೆ ಕೊಡುತ್ತೇನೆ ಎಂದಿದ್ದೀರಿ. ನನಗೆ ಗೃಹ ಖಾತೆ ಬೇಡ, ನಾನು ರೈತರಿಗೆ ಅನುಕೂಲವಾಗುವಂತ ಕಂದಾಯ ಖಾತೆ ಕೊಡಿ ಎಂದು ಹೇಳಿದ್ದೆ. ಆದರೆ ನೀವು ನನಗೆ ಕೊಟ್ಟಿದ್ದು ಉನ್ನತ ಶಿಕ್ಷಣ ಖಾತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾ.ರಾ.ಮಹೇಶ್‍ನನ್ನು ಸಚಿವನಾಗಿ ಮಾಡುವ ಪ್ರಮೇಯವೇ ಇರಲಿಲ್ಲ. ಜಿ.ಟಿ.ದೇವೇಗೌಡರಿಗೆ ಪರ್ಯಾಯವಾಗಿ ಬೆಳೆಸಬೇಕು ಎಂದು ಮಹೇಶ್ ರನ್ನು ಸಚಿವರನ್ನಾಗಿ ಮಾಡಿದಿರಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News