ತೇಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟಡಕ್ಕೆ 20 ಲಕ್ಷ ರೂ. ನೆರವು: ಧರ್ಮೇಗೌಡ

Update: 2019-09-21 17:57 GMT

ಚಿಕ್ಕಮಗಳೂರು, ಸೆ.21: ತೇಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಬೆಳವಣಿಗೆಗೆ ಪೂರಕವಾಗಿ ಸ್ವಂತ ಕಟ್ಟಡವನ್ನು ನಿರ್ಮಿಸಲು ಕೆಎಂಎಫ್, ಹಾಸನ ಹಾಲು ಒಕ್ಕೂಟ ಮತ್ತು ತಮ್ಮ ವಿಧಾನ ಪರಿಷತ್ ಶಾಸಕರ ಅನುದಾನವೂ ಸೇರಿ ಒಟ್ಟು 20 ಲಕ್ಷ ರೂ. ನೆರವು ನೀಡುವುದಾಗಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಭರವಸೆ ನೀಡಿದರು.

ತಾಲೂಕಿನ ತೇಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2018-19ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಂಘವು ಸುಮಾರು 10.5 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿರುವುದು ಹೆಮ್ಮೆಯ ವಿಚಾರ. ಕಳೆದ 3 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಹೋರಾಟ ಮಾಡಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದು, ಎಲ್ಲರ ಸಹಕಾರದೊಂದಿಗೆ ಮುಂದೆಯೂ ಮುಂದುವರಿಸಿಕೊಂಡು ಹೋದರೆ ಸಂಘವು ಮತ್ತಷ್ಟು ಲಾಭದಾಯಕವಾಗಿ ಬೆಳೆಯುತ್ತದೆ ಎಂದರು.

ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಸುಮಾರು 9 ಲಕ್ಷ ರೂ.ಗಳ ಮಾಸಿಕ ವ್ಯವಹಾರವನ್ನು ಹಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮೂಲಕ ಮಾಡಿದ್ದೀರಿ. ಹಾಲು ಮಾರಾಟ ಮಾಡುವ ಮೂಲಕ ನೂರಾರು ಕುಟುಂಬಗಳು ಬದುಕಿನ ದಾರಿ ಕಂಡುಕೊಂಡಿದ್ದಾರೆ. ಆರ್ಥಿಕವಾಗಿ ಸಬಲತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮ ಧರ್ಮೇಗೌಡ, ನಮ್ಮ ಊರಿನಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಸ್ಥಾಪಿಸಲು ನೆರವಾಗಿದ್ದರು. ಇಂದು ಸಂಘವು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ. ಜೊತೆಗೆ ಹಾಲು ಉತ್ಪಾದಕರೂ ಆರ್ಥಿಕವಾಗಿ ಸಶಕ್ತರಾಗುತ್ತಿದ್ದಾರೆ. ಬದುಕಿಗೆ ಬೆಳಕು ತೋರಿರುವ ಧರ್ಮೇಗೌಡರವರು ಈಗ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನೆರವಾಗುವುದಾಗಿ ಭರವಸೆ ನೀಡಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ವತಿಯಿಂದ ಧರ್ಮೇಗೌಡರವರನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಹಾಸನ ಹಾಲು ಒಕ್ಕೂಟದ ಮುಖ್ಯಾಧಿಕಾರಿಗಳಾದ ಕೆ.ಗೋಪಾಲಗೌಡ, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಹೆಚ್.ಎಂ.ನಟರಾಜ್ ಮತ್ತಿತರರು ಉಪಸ್ಥಿತರಿದ್ದು, ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News