ಶಿಸ್ತಿನ ಜೀವನ ಕ್ರಮ ಸೈನಿಕರಿಗೆ ಮಾತ್ರ ಸೀಮಿತವಾಗಬಾರದು: ಲೆ.ಜನರಲ್ ಪಿ.ಸಿ.ತಿಮ್ಮಯ್ಯ

Update: 2019-09-21 18:13 GMT

ಮಡಿಕೇರಿ, ಸೆ.21: ಸಾಮಾನ್ಯ ಯುವಕನನ್ನು ಕೂಡ ಸಮರ್ಥ ಅಧಿಕಾರಿಯನ್ನಾಗಿ ರೂಪಿಸುವ ಸಾಮರ್ಥ್ಯ ಸೈನ್ಯಕ್ಕಿದ್ದು, ಶಿಸ್ತು, ಮಾನವೀಯತೆ ಮತ್ತು ಮೌಲ್ಯಾಧಾರಿತ ವ್ಯವಸ್ಥೆಯಿಂದ ಮಾತ್ರವೇ ಇದು ಸಾಧ್ಯವಾಗಿದೆ ಎಂದು ಭಾರತೀಯ ಭೂ ಸೇನೆಯ ತರಬೇತಿ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪಟ್ಟಚೆರುವಂಡ ಸಿ.ತಿಮ್ಮಯ್ಯ, ಪಿವಿಎಸ್‍ಎಂ, ವಿಎಸ್‍ಎಂ, ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ಕೊಡವ ಸಮಾಜ ಮತ್ತು ಕೊಡವ ವಿದ್ಯಾನಿಧಿ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಸ್ತು ಕೇವಲ ಸೈನ್ಯಕ್ಕೆ ಅಥವಾ ಸೈನಿಕರಿಗೆ ಸೀಮಿತವಾಗಿರಬಾರದು, ಸಮಾಜದ ಪ್ರತಿ ವ್ಯಕ್ತಿಯೂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕೆಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸದಾ ಪ್ರತಿಪಾದಿಸುತ್ತಿದ್ದರು ಎಂದು ಸ್ಮರಿಸಿದ ಲೆ.ಜ. ತಿಮ್ಮಯ್ಯ, ಶಿಸ್ತಿನ ಜೀವನದಿಂದ ಪ್ರಗತಿ ಸಾಧ್ಯ ಎಂದು ಹೇಳಿದರು. ಭೂ ಸೇನೆಯ 32 ವಿಭಾಗದ ಉಸ್ತುವಾರಿಯನ್ನು ವಹಿಸಿಕೊಂಡು ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.

ಲೆ.ಜ. ಕೋದಂಡ ಸೋಮಯ್ಯ ಅವರ ಆದರ್ಶ ಮತ್ತು ತಮ್ಮ ತಂದೆ ದೇಶ ಸೇವೆ ಮಾಡುವಂತೆ ಹೇಳಿದ ಪ್ರೇರಣಾ ನುಡಿಗಳೇ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಅನುಭವ ಹಂಚಿಕೊಂಡರು.

ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗಿದ್ದು, ಹಲವು ರಂಗಗಳಲ್ಲಿ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಶಾಲಾ, ಕಾಲೇಜುಗಳು ವಿದ್ಯಾ ಮಂದಿರಗಳಾಗಿದ್ದು, ಅಲ್ಲಿ ಶಿಸ್ತು, ಮಾನವೀಯತೆ ಮತ್ತು ಮೌಲ್ಯಯುತ ಶಿಕ್ಷಣವನ್ನು ಧಾರೆ ಎರೆಯಬೇಕು ಎಂದು ಕಿವಿಮಾತು ಹೇಳಿದರು. ಸಾಧನೆಯ ಹಾದಿಯಲ್ಲಿ ಸವಾಲುಗಳು ಎದುರಾಗುವುದು ಸಹಜ, ಗುರಿ ಮುಟ್ಟುವ ಕೊನೆಯಲ್ಲಿ ಫಲಿತಾಂಶಗಳು ಏನೇ ಆದರೂ, ಅವುಗಳಿಗೆ ಅಂಜದೆ ಗುರಿ ಸಾಧಿಸಬೇಕೆಂದು ಲೆಫ್ಟಿನೆಂಟ್ ಜನರಲ್ ಪಿ.ಸಿ.ತಿಮ್ಮಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ತಮ್ಮ ಆಯ್ಕೆಯ ಕ್ಷೇತ್ರವನ್ನು ಪ್ರೀತಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯವೆಂದರು.  1863ರಲ್ಲಿ 4 ಮಂದಿ ಹಿರಿಯರಿಂದ ಆರಂಭಗೊಂಡ ಕೊಡವ ವಿದ್ಯಾನಿಧಿ 150 ವರ್ಷಗಳನ್ನೇ ಪೂರೈಸಿದೆ. ಕೊಡವ ಜನಾಂಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿರಿಯರು ರೂಪಿಸಿದ ಮುಂದಾಲೋಚನೆಯ ಯೋಜನೆ ಇಂದು ಹೆಮ್ಮರವಾಗಿ ಬೆಳೆದಿದೆ. 800ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ವಿದ್ಯಾನಿಧಿಯಿಂದ ನೆರವು ನೀಡಿರುವುದು ದೊಡ್ಡ ಸಾಧನೆಯೆಂದು ಬಣ್ಣಿಸಿದ ಲೆ.ಜ. ತಿಮ್ಮಯ್ಯ, ವಿದ್ಯಾರ್ಥಿಗಳು ಸಮಾಜ ಮತ್ತು ದೇಶ ಸೇವೆ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದರು. 

ದಾನಿಗಳಾದ ಪಾಲೆಕಂಡ ಜಿ.ಬೆಳ್ಯಪ್ಪ ಮಾತನಾಡಿ, ಕೊಡವ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಾಧನೆ ತೋರುವ ಮೂಲಕ ತಮ್ಮ ಜನಾಂಗ ಮತ್ತು ಹೆತ್ತವರಿಗೆ ಗೌರವ ತರಬೇಕೆಂದರು. ಉಪಯೋಗವಿಲ್ಲದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವಂತೆ ಕಿವಿಮಾತು ಹೇಳಿದ ಅವರು, ವಿಶಿಷ್ಟವಾದ ಕೊಡವ ಸಂಸ್ಕøತಿ, ಆಚಾರ, ವಿಚಾರವನ್ನು ಇಂದಿನ ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. ಶೈಕ್ಷಣಿಕ ನೆರವನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೇರಿದ ನಂತರ ನೆರವು ನೀಡಿದ ಸಂಸ್ಥೆಗಳನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಬೆಳ್ಯಪ್ಪ ಕಿವಿಮಾತು ಹೇಳಿದರು.

ಸನ್ಮಾನ
ಇದೇ ಸಂದರ್ಭ ಲೆ.ಜ. ತಿಮ್ಮಯ್ಯ ಮತ್ತು ಪಾಲೆಕಂಡ ಜಿ.ಬೆಳ್ಯಪ್ಪ ಅವರನ್ನು ಕೊಡವ ಸಮಾಜ ಮತ್ತು ಕೊಡವ ವಿದ್ಯಾನಿಧಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. 

ಕೊಡವ ವಿದ್ಯಾನಿಧಿ ಅಧ್ಯಕ್ಷ ಕೂತಂಡ ಪಿ. ಉತ್ತಪ್ಪ ಹಾಗೂ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರಿಗೆ ಲೆ.ಜ. ತಿಮ್ಮಯ್ಯ ಭಾರತೀಯ ಸೇವೆಯ ಗೌರವ ಫಲಕ ಮತ್ತು ಸೈಬರ್ ಇಂಟೆಲಿಜೆನ್ಸ್ ಸೈನಿಕನ ಪುತ್ಥಳಿಯನ್ನು ಗೌರವ ಸೂಚಕವಾಗಿ ಸಮರ್ಪಿಸಿದರು.

ಬಳಿಕ ಗಣ್ಯರು ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ 32 ವಿದ್ಯಾರ್ಥಿಗಳಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಪುಷ್ಪಾ ಕುಟ್ಟಣ್ಣ, ಮಡಿಕೇರಿ ಕೊಡವ ಸಮಾಜದ ನಿರ್ದೇಶಕರು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News