ಯುವ ಮತದಾರರ ಹೆಸರು ನೋಂದಣಿಗೆ ಶಾಲಿನಿ ರಜನೀಶ್ ಸೂಚನೆ

Update: 2019-09-21 18:23 GMT

ಶಿವಮೊಗ್ಗ, ಸೆ.21: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಚುನಾವಣೆಗಳನ್ನು ಜನಸಾಮಾನ್ಯರು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು. ಮಾತ್ರವಲ್ಲ ಮತದಾರರು ಶೇ.100ರಷ್ಟು ಮತದಾನ ಮಾಡುವಂತಾಗಬೇಕು ಎಂದು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗ ಶಾಲಿನಿ ರಜನೀಶ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿ ಮತದಾರರ ನೋಂದಣಿ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈಗಾಗಲೇ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದ್ದು, ಈ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರಲಿದೆ. ಅದಕ್ಕಾಗಿ ತರಬೇತಿ ಹೊಂದಿದ ಜಿಲ್ಲೆಯ 1700ಕ್ಕೂ ಹೆಚ್ಚಿನ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆ ಭೇಟಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದರು.

ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅರಿವು ಜಾಥಾಗಳು, ಕರಪತ್ರಗಳು, ಪತ್ರಿಕೆ ಜಾಹಿರಾತುಗಳ ಮೂಲಕ ಹಾಗೂ ಶಾಲಾ-ಕಾಲೇಜುಗಳಲ್ಲಿ ಮಾಹಿತಿ ಶಿಬಿರಗಳನ್ನು ಏರ್ಪಡಿಸಬೇಕು. ಅಲ್ಲದೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ರಾಜಕೀಯ ಪಕ್ಷಗಳಿಂದ ನಿಯೋಜಿತರಾದ ಮತಗಟ್ಟೆ ಕಾರ್ಯಕರ್ತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳುವಂತೆ ಸೂಚಿಸಿದರು.

ಈ ಎಲ್ಲಾ ಕಾರ್ಯಕ್ರಮಗಳ ಉದ್ದೇಶವೆಂದರೆ, 2020ರ ಜನವರಿ 1ಕ್ಕೆ 18ವರ್ಷ ಪೂರ್ಣಗೊಳ್ಳಲಿರುವ ಅರ್ಹ ಮತದಾರರೆಲ್ಲರೂ ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಯಾರೊಬ್ಬರೂ ಚುನಾವಣಾ ಪ್ರಕ್ರಿಯೆಯಿಂದ ಹಿಂದುಳಿಯದಂತೆ ಕ್ರಮ ವಹಿಸಲು ಸೂಚಿಸಿದ ಅವರು, ಈ ಹಿಂದೆ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಹರ್ಷವೆನಿಸಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದವರು ನುಡಿದರು.

ನಗರದ ಪ್ರದೇಶದ ವಾರ್ಡುಗಳಲ್ಲಿನ ಚುನಾಯಿತರಾದ ಪ್ರತಿನಿಧಿಗಳು ಕೂಡ ತಮ್ಮ ವ್ಯಾಪ್ತಿಯಲ್ಲಿ ಕಂದಾಯ ಇಲಾಖಾ ಅಧಿಕಾರಿಗಳ ಸಹಯೋಗದೊಂದಿಗೆ ಸಭೆಗಳನ್ನು ಆಯೋಜಿಸಿ, ಹೆಚ್ಚಿನ ಮತದಾರರ ನೋಂದಣಿಗೆ ಕ್ರಮ ವಹಿಸುವಂತೆ ಸೂಚಿಸಿದ ಅವರು, ಮತದಾರರು ತಮ್ಮ ಅಗತ್ಯ ಮಾಹಿತಿಗಳಿಗಾಗಿ ಉಚಿತ ಸಹಾಯವಾಣಿ 1950ಗೆ, ಅಥವಾ ಜಿಲ್ಲಾ ಚುನಾವಣಾ ಶಾಖೆಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಒಂದು ವೇಳೆ ತಮ್ಮ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಸ್ವತಃ ಶಾಲಿನಿ ರಜನೀಶ್ ಅವರ ಮೊ.9448091606ಗೆ ಕರೆ ಮಾಡಬಹುದಾಗಿದೆ ಎಂದವರು ನುಡಿದರು.

ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ, ಕಾರಣಗಳನ್ನು ತಿಳಿದು, ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ಶೇ.100ರಷ್ಟು ಮತದಾನ ಮಾಡಲು ಮತದಾರರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮತದಾರರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ ಹಾಗೂ ತೆಗೆದು ಹಾಕುವಲ್ಲಿ ಮತಗಟ್ಟೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಈ ಕಾರ್ಯ ನಿರ್ವಹಿಸುವಲ್ಲಿ ಪಕ್ವರಾಗಿರದ ಸಿಬ್ಬಂದಿಧಿಗಳನ್ನು ಕಾರ್ಯದಿಂದ ಮುಕ್ತಗೊಳಿಸಿ ಪರ್ಯಾಯ ಹಾಗೂ ಸ್ಥಳೀಯವಾಗಿರುವ ಅಭ್ಯರ್ಥಿಗಳನ್ನು ನಿಯೋಜಿಸುವಂತೆ ಹಾಗೂ ತಹಶೀಲ್ದಾರರು ಈ ಕಾರ್ಯದಲ್ಲಿ ನ್ಯೂನತೆಗಳಾಗದಂತೆ ಕ್ರಮವಹಿಸಲು ಸೂಚಿಸಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬೇಕಾದ ವಿವಿದ ನಮೂನೆಯ ಅರ್ಜಿಗಳನ್ನು ಸುಲಭವಾಗಿ ಸರಳವಾಗಿ ಎಲ್ಲೆಡೆಯೂ ದೊರೆಯುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಉತ್ಸಾಹ ತೋರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸೇವೆಯನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಈವರೆಗೆ ಜಿಲ್ಲೆಯಲ್ಲಿ 14,47,424ಮತದಾರರ ಹೆಸರು ನೋಂದಣಿಯಾಗಿದೆ. ಈ ಅವಧಿಯಲ್ಲಿ 10,000ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಈಗಾಗಲೇ 6,000 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಯುವ ಮತದಾರರ ಸಂಖ್ಯೆ ರಾಜ್ಯದ ಮತದಾರರಗಿಂತ ಹೆಚ್ಚಳವಾಗಿದೆ. ಮತದಾರರ ಪರಿಶೀಲನೆಗಾಗಿ ಚುನಾವಣಾ ಶಾಖೆಯಿಂದ ಮಾಡಿದ ಫೋನ್ ಕರೆಗಳಲ್ಲಿ 15 ಜನ ಮತದಾರರು ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಮತದಾರರ ಸೇರ್ಪಡೆಗಾಗಿ ವಿಶೇಷ ಆಂದೋಲನ ಏರ್ಪಡಿಸಲಾಗುವುದು ಎಂದರು.

ಮಳೆಯಿಂದಾಗಿ ದಾಖಲೆಗಳನ್ನು ಎಲ್ಲವನ್ನು ಕಳೆದುಕೊಂಡಿರುವ ಮತದಾರರಿಗೂ ಹೊಸದಾಗಿ ಕಾರ್ಡನ್ನು ನೀಡಲು ಸೂಚಿಸಲಾಗಿದೆ. ಅದಕ್ಕಾಗಿ ಮತದಾರರು ಕೋರಿಕೆ ಸಲ್ಲಿಸಿದಲ್ಲಿ ಕ್ರಮವಹಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಂದಾಯ ಹಾಗೂ ಚುನಾವಣಾ ಶಾಖೆಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News