ಗುಡ್‌ನ್ಯೂಸ್: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿದ ಮಹಿಳೆಯರು

Update: 2019-09-22 04:03 GMT

ಹೊಸದಿಲ್ಲಿ, ಸೆ.22: ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ನೋಂದಣಿಯಾಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಪುರುಷರು ಹಾಗೂ ಮಹಿಳೆಯರ ನಡುವಿನ ಅಂತರ ಕಡಿಮೆಯಾಗಿದೆ. ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಪುರುಷರಿಗಿಂತ ಅಧಿಕ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ.

ಎಐಎಸ್‌ಎಚ್‌ಇ ವರದಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶನಿವಾರ ಈ ವರದಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಕಾಲೇಜು ಹಾಗೂ ವಿವಿಗಳಲ್ಲಿ ಮಹಿಳೆಯರಿಗಿಂತ 1.61 ಲಕ್ಷ ಪುರುಷರು ಹೆಚ್ಚುವರಿಯಾಗಿ ಪ್ರವೇಶ ಪಡೆದಿದ್ದರು. ಆದರೆ ಪ್ರಸಕ್ತ ವರ್ಷ ಪುರುಷರಿಗಿಂತ 90 ಸಾವಿರ ಅಧಿಕ ಮಹಿಳೆಯರು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ವರದಿ ವಿವರಿಸಿದೆ.

ಕರ್ನಾಟಕದಲ್ಲಿ ಕೂಡಾ ಪುರುಷರಿಗಿಂತ 1,600ರಷ್ಟು ಅಧಿಕ ಮಹಿಳೆಯರು ಉನ್ನತ ಶಿಕ್ಷಣ ಪ್ರವೇಶ ಪಡೆದಿದ್ದಾರೆ. ಇಡೀ ದೇಶಾದ್ಯಂತ ಕೂಡಾ ಈ ಪ್ರವೃತ್ತಿ ಮುಂದುವರಿದಿದ್ದು, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರಲ್ಲಿ ಮಹಿಳೆಯರ ಪ್ರಮಾಣ 2017-18ರಲ್ಲಿ ಶೇಕಡ 47.6ರಷ್ಟಿದ್ದರೆ, ಈ ವರ್ಷ ಅದು 48.6ಕ್ಕೆ ಹೆಚ್ಚಿದೆ.

ಮೂರನೇ ಒಂದರಷ್ಟು ವಿದ್ಯಾರ್ಥಿನಿಯರು ಪದವಿ ಹಂತದಲ್ಲಿ ಮಾನವಿಕ ವಿಭಾಗಗಳಲ್ಲಿ ಪ್ರವೇಶ ಪಡೆದಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ವ್ಯವಸ್ಥಾಪನಾ ಕೋರ್ಸ್‌ಗಳು ಮಹಿಳೆಯರಿಗೆ ಹೆಚ್ಚು ಪ್ರಿಯವಾಗಿರುವುದು ಕಂಡುಬಂದಿದೆ. ವಿಜ್ಞಾನ, ಎಂಜಿನಿಯರಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಎಂಫಿಲ್ ಹಾಗೂ ಪಿಎಚ್‌ಡಿಗಳಿಗೆ ಅಧಿಕ ಮಹಿಳೆಯರು ಪ್ರವೇಶ ಪಡೆದಿದ್ದಾರೆ.

ಎಐಎಸ್‌ಎಚ್‌ಇ ವರದಿಯ ಪ್ರಕಾರ ಪದವಿ ಹಂತದಲ್ಲಿ ಶೇಕಡ 35.9ರಷ್ಟು ಮಹಿಳೆಯರು ಕಲೆ/ ಮಾನವಿಕ/ ಸಮಾಜ ವಿಜ್ಞಾನದಲ್ಲಿ ಪ್ರವೇಶ ಪಡೆದಿದ್ದರೆ, ವಿಜ್ಞಾನ ಅಧ್ಯಯನ ಮಾಡಲು ಮುಂದಾದ ಮಹಿಳೆಯರ ಪ್ರಮಾಣ ಕೇವಲ 16.5%. ಶೇಕಡ 14.1ರಷ್ಟು ಮಹಿಳೆಯರು ವಾಣಿಜ್ಯ ಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದರೆ, ಎಂಜಿನಿಯರಿಂಗ್ ನಾಲ್ಕನೇ ಆದ್ಯತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News