ಉಪಚುನಾವಣೆ ಟಿಕೆಟ್ ಹಂಚಿಕೆ: ಟ್ವಿಟರ್ ನಲ್ಲಿ ಅಸಮಾಧಾನ ತೋಡಿಕೊಂಡ ನಟ ಜಗ್ಗೇಶ್

Update: 2019-09-22 14:52 GMT

ಬೆಂಗಳೂರು, ಸೆ.22: ಅನರ್ಹಗೊಂಡ 15 ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ತಲೆ ನೋವು ಶುರುವಾಗಿದ್ದು, ಈ ನಡುವೆ ನಟ ಜಗ್ಗೇಶ್ ಟ್ವೀಟ್ ಮೂಲಕ ಟಿಕೆಟ್ ಹಂಚಿಕೆ ಕುರಿತು ಅಸಮಾಧಾನ ತೋಡಿಕೊಂಡಿದ್ದಾರೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅನರ್ಹ ಶಾಸಕರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪು ಕೂಡಾ ವಿಳಂಬವಾಗುತ್ತಿರುವುದರಿಂದ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರು ಚುನಾವಣೆ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಂದು ವೇಳೆ, ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆತರೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇರುವುದರಿಂದ ಪಕ್ಷದ ಹಲವರಲ್ಲಿ ಟಿಕೆಟ್ ತಪ್ಪುವ ಭೀತಿ ಶುರುವಾಗಿದ್ದು, ನಟ ಜಗ್ಗೇಶ್ ಕೂಡಾ ಟ್ವೀಟ್ ಮೂಲಕ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಜಗ್ಗೇಶ್, 'ಬೈ ಎಲೆಕ್ಷನ್ ಬಂತು! 2018ರಲ್ಲಿ ಕಡೆ ಗಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು! ಮೌನವಾಗಿ ಇರಲೋ? ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ! ಎಂದು ಬರೆದು ಬಿಜೆಪಿ ಕರ್ನಾಟಕ ಮತ್ತು ಬಿ.ಎಲ್.ಸಂತೋಷ್ ಅವರನ್ನು ಟ್ಯಾಗ್ ಮಾಡಿದ್ದಾರೆ. 

ಮಾಜಿ ಶಾಸಕ, ವಿಧಾನಪರಿಷತ್ ಸದಸ್ಯರಾಗಿರುವ ನಟ ಜಗ್ಗೇಶ್, 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಸಾಧ್ಯತೆ ಇರುವುದರಿಂದ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News