ಬಿಲ್ಲವ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಲು ಕ್ರಮ: ಕೋಟ ಶ್ರೀನಿವಾಸ ಪೂಜಾರಿ

Update: 2019-09-22 14:21 GMT

ಸೊಲ್ಲಾಪುರ, ಸೆ.22: ಬಿಲ್ಲವ ಸಮುದಾಯವನ್ನು 2ಎ ವರ್ಗದಿಂದ ಪ್ರವರ್ಗ 1ಕ್ಕೆ ಸೇರಿಸಲು ಸರಕಾರದ ಗಮನ ಸೆಳೆಯಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ರವಿವಾರ ನಗರದ ಬಿಲ್ಲವ ಭವನದಲ್ಲಿ ಬಿಲ್ಲವ ಅಸೋಸಿಯೇಶನ್ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ನಿರ್ಮಿಸಲು ಬಿಲ್ಲವ ಅಸೋಸಿಯೇಶನ್‌ಗೆ ಎರಡು ಎಕರೆ ಭೂಮಿ ನೀಡುವ ಸಂಬಂಧ ಸಿಎಂ ಜೊತೆ ಚರ್ಚಿಸಲಾಗುವುದು. ಈ ಬಗ್ಗೆ ನಿಯೋಗವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಕರೆದುಕೊಂಡು ಹೋಗಿ ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಕಳೆದ 20 ವರ್ಷದ ಹಿಂದೆ ಬಿಲ್ಲವ ಜನಾಂಗದ ವ್ಯಕ್ತಿ ಶ್ರೀಮಂತರ ಮನೆ ಅಂಗಳ ಪ್ರವೇಶ ಮಾಡಬೇಕಾದರೆ ಹೆಬ್ಬಾಗಿಲಿನ ಹೊರನಿಂತು ಕೈಕಟ್ಟಿ ಧಣಿ ಒಳಗೆ ಬರಬಹುದಾ ಎಂದು ಕೇಳುವ ಕಾಲ ಇತ್ತು. ಆದರೆ, ಸಂಘಟನಾತ್ಮಕ ಶಕ್ತಿಯಿಂದ ಈ ಸಮುದಾಯದ ವ್ಯಕ್ತಿಯೊಬ್ಬರು ಕೇಂದ್ರದ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮುದಾಯದವರು ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ.

ವಿಧಾನ ಪರಿಷತ್ತು ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಬಿಲ್ಲವ ಅಸೋಸಿಯೇಶನ್ ಶ್ರಮಿಸುತ್ತಿದ್ದು, ಬಿಲ್ಲವ ಭವನ, ಗ್ರಂಥಾಲಯ ನಿರ್ಮಿಸಿದೆ. ಎಂಎಲ್‌ಸಿ ಅನುದಾನದಲ್ಲಿ ಮೂರು ಲಕ್ಷ ರೂ. ವೆಚ್ಚದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಸೋಸಿಯೇಶನ್ ವತಿಯಿಂದ ಶಾಲೆ ನಿರ್ಮಿಸಲು ಚಿಂತಿಸಲಾಗಿದ್ದು, ಸರ್ಕಾರ ಅವಶ್ಯ ಭೂಮಿ ನೀಡಬೇಕು. ನಾರಾಯಣ ಗುರು ಜಂಕ್ಷನ್ ಬಳಿ ಇರುವ ಮೆಟ್ರೋ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು ಎಂದು ಮನವಿ ಮಾಡಿದರುಸಮಾರಂಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 70 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News