ನಾಳೆ ಅನರ್ಹ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂ ಕೋರ್ಟ್‌ನತ್ತ ಎಲ್ಲರ ಚಿತ್ತ

Update: 2019-09-22 14:31 GMT

ಬೆಂಗಳೂರು, ಸೆ. 22: ಅನರ್ಹಗೊಂಡ ಕಾಂಗ್ರೆಸ್-ಜೆಡಿಎಸ್ ಶಾಸಕರ 15 ಕ್ಷೇತ್ರಗಳಿಗೆ ಅ.21ಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಇದರ ಬೆನ್ನಲ್ಲೆ ಅನರ್ಹರ ಅರ್ಜಿಯೂ ನಾಳೆ(ಸೆ.23) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಎಲ್ಲರ ಚಿತ್ತ ಕೋರ್ಟ್‌ನ ವಿಚಾರಣೆಯತ್ತ ನೆಟ್ಟಿದೆ.

ಕಾನೂನು ಹೋರಾಟದ ಮೂಲಕ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಕ್ರಮವನ್ನು ಪ್ರಶ್ನಿಸಿ ಶಾಸಕ ಸ್ಥಾನ ಉಳಿಸಿಕೊಳ್ಳಲು ಯತ್ನ ನಡೆದಿದೆ. ಒಂದು ವೇಳೆ ಅದಕ್ಕೆ ಕೋರ್ಟ್‌ನಲ್ಲಿ ಮನ್ನಣೆ ದೊರೆಯದಿದ್ದರೆ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೋರುವುದು ಸೇರಿ ಇನ್ನಿತರ ಪ್ರಯತ್ನಗಳಲ್ಲಿ ಅನರ್ಹರು ತೊಡಗಿದ್ದಾರೆ.

ನಾಳೆ ಹೊರಬರಲಿರುವ ಕೋರ್ಟ್ ‘ತೀರ್ಮಾನ’ ಅನರ್ಹರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದು, ಈ ಶಾಸಕರು ಉಪಚುನಾವಣೆ ಯಲ್ಲಿ ಸ್ಪರ್ಧಿಸಲು ನ್ಯಾಯಾಲಯ ಅವಕಾಶ ನೀಡಲಿದೆಯೇ ಅಥವಾ 2023ರ ವರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ರಮೇಶ್‌ ಕುಮಾರ್ ಆದೇಶ ಎತ್ತಿ ಹಿಡಿಯಲಿದೆಯೆ ಎಂಬ ಕುತೂಹಲ ಸೃಷ್ಟಿಸಿದೆ.

ಆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅನರ್ಹ ಶಾಸಕರು ಅಥವಾ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಕುರಿತು ಚರ್ಚಿಸಿದ್ದು, ಇದಕ್ಕೆ ಅಮಿತ್ ಶಾ ಸಮ್ಮತಿಸಿದ್ದಾರೆಂದು ಗೊತ್ತಾಗಿದೆ.

ಹದಿನೈದು ಕ್ಷೇತ್ರಗಳ ಈ ಉಪ ಚುನಾವಣೆ ಬಿಜೆಪಿ ಸರಕಾರಕ್ಕೆ ಅಳಿವು-ಉಳಿವಿನ ಸವಾಲನ್ನು ತಂದೊಡ್ಡಿದೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕಾದ ಪ್ರತಿಷ್ಠೆ ಎದುರಾಗಿದ್ದು ಗೆಲ್ಲುವ ಅಭ್ಯರ್ಥಿಗಳಿಗಾಗಿ ಮೂರು ಪಕ್ಷಗಳು ಹುಡುಕಾಟ ನಡೆಸಿವೆ.

ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿದ್ದು, ಬಹಿರಂಗ ಸಮಾವೇಶಗಳನ್ನು ನಡೆಸಿದ್ದಾರೆ. ಪಕ್ಷದ್ರೋಹಿಗಳಿಗೆ ತಕ್ಕಪಾಠ ಕಲಿಸಬೇಕೆಂದು ಮತದಾರರಿಗೆ ಮನವಿ ಮಾಡುವ ಮೂಲಕ ಅನರ್ಹರ ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.

ಅ.21ಕ್ಕೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅ.4 ಕೊನೆಯ ದಿನ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಗೆ ಸಮಯಾವಕಾಶ ಬಹಳ ಕಡಿಮೆ ಇದ್ದು, ಕೋರ್ಟ್ ಪ್ರಕ್ರಿಯೆ ಸೇರಿದಂತೆ ಎಲ್ಲವೂ ತರಾತುರಿಯಲ್ಲಿ ನಡೆಯಬೇಕಿದೆ. ಹೀಗಾಗಿ ಅನರ್ಹರ ಭವಿಷ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News