ಗೋಕಾಕ್ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ: ಲಖನ್ ಜಾರಕಿಹೊಳಿ

Update: 2019-09-22 14:52 GMT

ಬೆಳಗಾವಿ, ಸೆ. 22: ‘ಎದುರಾಳಿ ಯಾರು ಎನ್ನುವುದು ಇನ್ನೂ ಗೊತ್ತಿಲ್ಲ. ಆದರೆ, ಗೋಕಾಕ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನೇ ಸ್ಪರ್ಧಿಸಲಿದ್ದೇನೆ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಲಖನ್ ಜಾರಕಿಹೊಳಿ ಘೋಷಿಸಿದ್ದಾರೆ.

ರವಿವಾರ ಗೋಕಾಕ್ ಕ್ಷೇತ್ರದ ಧುಪದಾಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ತಂದೆ ಕಾಲದಿಂದಲೂ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದು ಟಿಕೆಟ್ ಸಿಗುವ ವಿಶ್ವಾಸವಿದೆ. ಕ್ಷೇತ್ರದ ಮತದಾರರ ನಾಡಿ ಮಿಡಿತ ಅರಿತಿದ್ದೇನೆ ಎಂದು ಹೇಳಿದರು.

ಉಪಚುನಾವಣೆ ಒಂದು ರೀತಿಯಲ್ಲಿ ಐಎಎಸ್ ಪರೀಕ್ಷೆ ಇದ್ದಂತೆ. ಹೀಗಾಗಿ ನಮ್ಮ ಪರೀಕ್ಷೆ ಆರಂಭವಾಗಿದೆ. ರಮೇಶ್ ಜಾರಕಿಹೊಳಿ ಅವರ ರಾಜಕೀಯವೂ ನನಗೆ ಗೊತ್ತು. ಹೀಗಾಗಿ ಅದಕ್ಕೆ ನಾನೂ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದೇನೆ ಎಂದ ಅವರು, ಕ್ಷೇತ್ರದ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ: ರಮೇಶ್ ಜಾರಕಿಹೊಳಿ ಮೂವರು ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಅವರ ಅಳಿಯಂದಿರ ಭ್ರಷ್ಟಾಚಾರ ಮಿತಿಮೀರಿದ್ದು, ಇದಕ್ಕೆ ಕಡಿವಾಣ ಹಾಕಲು ಸ್ಪರ್ಧೆ ಮಾಡುತ್ತಿದ್ದೇನೆ. ಇದೀಗ ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇನೆ. ಶೀಘ್ರವೇ ಪಂದ್ಯ ಆರಂಭವಾಗಲಿದೆ. ಗೆಲುವು ನಿಶ್ಚಿತವಾಗಿಯೂ ನಮ್ಮದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬ್ಲಾಕ್‌ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ನಡೆಯುವುದಿಲ್ಲ ಎಂದು ಲಖನ್ ಜಾರಕಿಹೊಳಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News