ಹೊರ ರಾಜ್ಯದಲ್ಲಿ ಕನ್ನಡದ ಬೆಳವಣಿಗೆಗೆ ನೆರವು ಅಗತ್ಯ: ಜಯ ಸಿದ್ದೇಶ್ವರ ಸ್ವಾಮೀಜಿ

Update: 2019-09-22 16:22 GMT

ಸೊಲ್ಲಾಪುರ, ಸೆ.22: ಮಹಾರಾಷ್ಟ್ರ ಸೇರಿದಂತೆ ಹೊರನಾಡಿನಲ್ಲಿ ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ವಿದ್ಯಾಭ್ಯಾಸ ಮಾಡುವ ಹಾಗೂ ಅಲ್ಲಿ ಸಂಶೋಧನೆ ಮಾಡುವ ಸಂಶೋಧನಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಕನ್ನಡದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೊಲ್ಲಾಪುರದ ಲೋಕಸಭಾ ಸದಸ್ಯ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ರವಿವಾರ ಮಹಾರಾಷ್ಟ್ರದ ಸೊಲ್ಲಾಪುರದ ಚನ್ನವೀರನಗರದ ವೀರತಪಸ್ವಿ ಶಿಕ್ಷಣ ಸಂಕುಲ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಮಹಾ ರಾಷ್ಟ್ರದ ಶಾಲಾ- ಕಾಲೇಜುಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಮಾಧ್ಯ ಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೊಲ್ಲಾಪುರ ಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಹಲವಾರು ರೀತಿಯ ಪ್ರೋತ್ಸಾಹ ನೀಡುತ್ತಿರುವ ಕರ್ನಾಟಕ ಸರಕಾರಕ್ಕೆ ಮಹಾರಾಷ್ಟ್ರದ ನಿವಾಸಿಗಳಾಗಿರುವ ಕನ್ನಡಿಗರು ಬೆಂಗಾವಲಾಗಿ ನಿಲ್ಲಬೇಕು. ಅಲ್ಲದೆ, ಹೊರನಾಡಿನಲ್ಲಿ ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ಅನುದಾನದ ನೆರವು ನೀಡಬೇಕು. ಕನ್ನಡ ಸಾಹಿತ್ಯ, ಕನ್ನಡ ಪ್ರಕಾಶನದ ಪುಸ್ತಕ, ಗ್ರಂಥಗಳನ್ನು ಇಲ್ಲಿನ ಕನ್ನಡ ಓದುಗರಿಗೆ ಒದಗಿಸುವ ಗ್ರಂಥಾಲಯ ಹಾಗೂ ಕಂಪ್ಯೂಟರ್ ಸೌಲಭ್ಯಗಳನ್ನು ಒದಗಿಲು ಕರ್ನಾಟಕ ಸರಕಾರ ಕ್ರಮ ಕೈಗೊಳ್ಳುವ ಮೂಲಕ ಕರ್ನಾಟಕ ಸರಕಾರ ಕನ್ನಡದ ಬೆಳವಣಿಗೆಗೆ ಪ್ರೋತ್ಸಾಹ ಒದಗಿಸಬೇಕು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಓದಿದ ಕನ್ನಡಿಗ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ಹೆಚ್ಚಿನ ಸರ್ಕಾರಿ ಹುದ್ದೆಗಳನ್ನು ನೀಡುವಂತಾಗಬೇಕು. ಕನ್ನಡ ಭಾಷೆ ನಿಜಕ್ಕೂ ಕಸ್ತೂರಿ ಇದ್ದಂತೆ, ಅದರ ಸೊಗಸು, ಶ್ರೀಮಂತಿಕೆ, ಸಮೃದ್ಧಿ ಎಲ್ಲ ಭಾಷೆಗಳಿಗೂ ದೊಡ್ಡದು, ಕನ್ನಡದಲ್ಲಿ ಮಾತನಾಡುವುದೇ ಒಂದು ಸೊಗಸು. ಕನ್ನಡಿಗರಾದ ನಾವೆಲ್ಲ ನಮ್ಮ ಮಾತೃ ಭಾಷೆಯನ್ನು ಅವಕಾಶ ದೊರೆತಾಗಲೆಲ್ಲ ಮಾತನಾಡುವ ಮೂಲಕ ಕನ್ನಡದ ಬೆಳವಣಿಗೆಗೆ ಕಾರಣೀಭೂತರಾಗಬೇಕು ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಉಪನ್ಯಾಸ ನೀಡಿದ ಕನ್ನಡದ ಹಿರಿಯ ಚಿಂತಕ ಹಾಗೂ ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಣ್ಣ ತಮ್ಮಂದಿರಿದ್ದಂತೆ. ಈ ಎರಡೂ ಪ್ರದೇಶಗಳು ಕೆಲ ವಿಷಯಗಳಲ್ಲಿ ಸಾಮ್ಯತೆ ಹೊಂದಿವೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸೊನ್ನಲಿಗೆ ಸಿದ್ದರಾಮೇಶ್ವರ, ಸಂತ ಜ್ಞಾನೇಶ್ವರ, ಅಂಬೇಡ್ಕರ್‌ರಂತಹ ಚಿಂತಕರನ್ನು ಈ ವಿಶ್ವಕ್ಕೆ ನೀಡಿದ ಹೆಮ್ಮೆ ಈ ಎರಡೂ ರಾಜ್ಯಗಳದ್ದಾಗಿದೆ ಎಂದರು.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಜ್ಞಾನಾಕಾಂಕ್ಷಿ ಪರಂಪರೆ ಮತ್ತು ಜಾತ್ಯತೀತ ಪರಂಪರೆಯ ಹಿನ್ನಲೆಯನ್ನು ಹೊಂದಿದ ಪ್ರದೇಶಗಳಾಗಿದ್ದು, ಈ ಎರಡೂ ರಾಜ್ಯಗಳು ವಿಶ್ವ ಪರಂಪರೆಗೆ ಹೆಚ್ಚಿನ ಒತ್ತು ನೀಡಿವೆ. ಕುವೆಂಪು, ಅಂಬೇಡ್ಕರ್‌ರಂತಹ ವಿಶ್ವ ಚಿಂತಕರನ್ನು ನೀಡಿವೆ.

ಅತ್ಯಂತ ಪ್ರಾಚೀನವಾದ ಕವಿರಾಜ ಮಾರ್ಗದಲ್ಲಿ ಹೇಳಿರುಂತೆ ಕನ್ನಡ ನಾಡು ಕಾವೇರಿಯಿಂದ ಗೋದಾವರಿಗೂ ಇತ್ತು ಎಂಬ ಹಿನ್ನೆಲೆಯಲ್ಲಿ ನಮ್ಮ ಕನ್ನಡದ ಪ್ರದೇಶಗಳು ಮಹಾರಾಷ್ಟ್ರದ ನಾಸಿಕದವರೆಗೂ ಇತ್ತೆಂಬುದನ್ನು ನಾವು ಗಮನಿಸಬೇಕಿದೆ. ಹಾಗಾಗಿಯೇ ಬೇರೆ ಗಡಿ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಕನ್ನಡ ಪ್ರದೇಶಗಳು ಮಹಾರಾಷ್ಟ್ರದಲ್ಲೇ ಇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News