'ನಮಗೆ ವಿಷ ಕೊಟ್ಟುಬಿಡಿ' ಎನ್ನುವುದು ಭಂಡತನ: ಅನರ್ಹ ಶಾಸಕರ ವಿರುದ್ಧ ಎಸ್‌ಡಿಪಿಐ ಆಕ್ರೋಶ

Update: 2019-09-22 17:15 GMT

ಬೆಂಗಳೂರು, ಸೆ.22: ‘ನಮ್ಮ ರಾಜಕೀಯ ಭವಿಷ್ಯವನ್ನು ಸಮಾಧಿ ಮಾಡಿ ಬಿಟ್ಟಿರಿ, ನಿಮ್ಮಿಂದ ನಾವು ಹಾಳಾಗಿದ್ದೇವೆ ನಮಗೆ ವಿಷ ಕೊಟ್ಟು ಬಿಡಿ’ ಎಂದು ರಾಜ್ಯದ 17 ಮಂದಿ ಅನರ್ಹ ಶಾಸಕರು ಗೋಗರೆಯುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಈ ಅನರ್ಹ ಶಾಸಕರು, ಅವರನ್ನು ಮತ ನೀಡಿ ಗೆಲ್ಲಿಸಿದ ಮತದಾರರಿಗೆ ದ್ರೋಹ ಬಗೆದು, ಕೇವಲ ಆಮಿಷ-ಅಧಿಕಾರದ ದಾಹದಿಂದ ಜಾತ್ಯತೀತ ಸಿದ್ಧಾಂತಗಳಿಗೆ ತಿಲಾಂಜಲಿಯಿತ್ತು, ಕ್ಷೇತ್ರದ ಜನತೆಯ ಭವಿಷ್ಯವನ್ನು ಸಮಾಧಿ ಮಾಡಿ ಬಿಟ್ಟಿರುವುದನ್ನು ಮರೆತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಇಂತಹ ಅನರ್ಹ ಶಾಸಕರಿಂದ ರಾಜ್ಯ ಹಾಗೂ ಜನರಿಗೆ ವಿಷ ನೀಡಿದಂತಾಗಿದೆ. ಹೇಗಿದ್ದರೂ ಇದೀಗ ಅನರ್ಹ ಶಾಸಕರೇ ತಮ್ಮ ಭವಿಷ್ಯವನ್ನು ಸಮಾಧಿ ಮಾಡಲಾಗಿದೆ, ನಮಗೆ ವಿಷ ಕೊಟ್ಟುಬಿಡಿ ಎನ್ನುವುದು ಎಷ್ಟೊಂದು ಕುಚೇದ್ಯ ಹಾಗೂ ಭಂಡತನ ಎನ್ನುವುದು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಇಲ್ಯಾಸ್ ತುಂಬೆ ಅಭಿಪ್ರಾಯಿಸಿದ್ದಾರೆ.

ಶಾಸಕರಿದ್ದಾಗ ರೆಸಾರ್ಟ್‌ಗಳಲ್ಲಿ ಅಡಗಿ ಕೂತು ಕ್ಷೇತ್ರವನ್ನು ನಿರ್ಲಕ್ಷಿಸಿದ ಅನರ್ಹ ಶಾಸಕರು, ಅಹಂಕಾರ ಹಾಗೂ ದರ್ಪದ ಮಾತುಗಳನ್ನಾಡುತ್ತಾ ಬಲಪಂಥೀಯ ವಿಚಾರಗಳಿಗೆ ಶರಣಾಗಿದ್ದರು. ಅದೇ ರೀತಿ, ಸರಕಾರವನ್ನು ಉರುಳಿಸಲು ಮತ್ತು ತಮ್ಮದೇ ಸರಕಾರವನ್ನು ರಚಿಸಲು ಬಿಜೆಪಿ ಕೂಡಾ ಅತ್ಯಂತ ಹೀನ ರಾಜಕೀಯವನ್ನು ಮಾಡಿತ್ತು ಎಂದು ಅವರು ಟೀಕಿಸಿದ್ದಾರೆ. ಒಂದು ಕಡೆಯಲ್ಲಿ ಆಮಿಷವನ್ನು ನೀಡಿ ಅನರ್ಹ ಶಾಸಕರಿಗೆ ಬಿಜೆಪಿ ಮೋಸ ಮಾಡಿದ್ದು, ಇನ್ನೊಂದೆಡೆಯಲ್ಲಿ ಅಧಿಕಾರಕ್ಕಾಗಿ ಇಡೀ ರಾಜ್ಯದ ಜನತೆಗೆ ಕ್ಷುದ್ರ ರಾಜಕೀಯದ ಮೂಲಕ ಮೋಸ ಮಾಡಿದ ಬಿಜೆಪಿಯೂ ಕೂಡಾ ರಾಜ್ಯವನ್ನು ಅಪಹಾಸ್ಯಕ್ಕೀಡುವಂತೆ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಾತ್ಯತೀತವೆಂಬ ಸಿದ್ಧಾಂತವನ್ನು ಕೇವಲ ತೋರಿಕೆಗೆ ಮಾತ್ರ ಬಳಸುತ್ತಿದೆ ಹೊರತು ನೈಜವಾಗಿ ಯಾವುದೇ ಬದ್ಧತೆಯಾಗಲೀ, ಪ್ರೇರಣೆಯಾಗಲೀ ಅವುಗಳಿಗೆ ಇಲ್ಲ. ಈ ಪಕ್ಷಗಳಿಗೆ ರಾಜ್ಯದ ಪ್ರಬುದ್ಧ ಮತದಾರರು ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕೆಂದು ಇಲ್ಯಾಸ್ ತುಂಬೆ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News