ಸೆ.23ಕ್ಕೆ ಮನ್‍ಮುಲ್ ಚುನಾವಣೆ: ಜೆಡಿಎಸ್‍ ಅಧಿಕಾರ ತಪ್ಪಿಸಲು ಕಾಂಗ್ರೆಸ್-ಬಿಜೆಪಿ ತಂತ್ರ !

Update: 2019-09-22 18:12 GMT

ಮಂಡ್ಯ, ಸೆ.22: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‍ಮುಲ್)ದ ಚುಕ್ಕಾಣಿ ಜೆಡಿಎಸ್ ಪಾಲಾಗುವುದನ್ನು ತಪ್ಪಿಸಲು ಕಾಂಗ್ರೆಸ್-ಬಿಜೆಪಿ ನಡೆಸಿವೆ ಎನ್ನಲಾದ ಕಾರ್ಯತಂತ್ರ ಕ್ಲೈಮಾಕ್ಸ್ ತಲುಪಿದೆ.

ಕಾಂಗ್ರೆಸ್ ಬಿಜೆಪಿ ಜತೆ ನಡೆಸಿರುವ ಕಾರ್ಯತಂತ್ರದಿಂದಾಗಿ ಹೆಚ್ಚು ಸ್ಥಾನ ಗಳಿಸಿದ್ದರೂ ಜೆಡಿಎಸ್ ಬೆಂಬಲಿತರು ಪ್ರತಿಷ್ಠಿತ ಮನ್‍ಮುಲ್ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯುವುದು ಅಷ್ಟು ಸುಲಭವಲ್ಲ ಎಂಬಂತಾಗಿದೆ. 12 ಸದಸ್ಯಬಲದ ಒಕ್ಕೂಟದ ನಿರ್ದೇಶಕ ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತರು 8 ಮಂದಿ, ಕಾಂಗ್ರೆಸ್ ಬೆಂಬಲಿತರು 3 ಅಭ್ಯರ್ಥಿಗಳು ಜಯಗಳಿಸಿದ್ದು, ಒಂದೇ ಒಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಮೇಲ್ನೋಟಕ್ಕೆ ಒಕ್ಕೂಟದ ಆಡಳಿತದ ಗದ್ದುಗೆ ಜೆಡಿಎಸ್‍ಗೆ ಸುಲಭವಾಗಿ ಸಿಗಲಿದೆ. ಆದರೆ, ಹೇಗಾದರೂ ಜೆಡಿಎಸ್‍ನ್ನು ಅಧಿಕಾರದಿಂದ ದೂರವಿಡಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್, ಬಿಜೆಪಿ ಜತೆ ತಂತ್ರ ರೂಪಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ನಿಚ್ಚಳವಾಗಿದೆ

ಈ ಬೆಳವಣಿಗೆಯ  ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರೊಬ್ಬರ ಆಯ್ಕೆಯನ್ನು ಅನರ್ಹಗೊಳಿಸಿರುವುದು ಜೆಡಿಎಸ್‍ಗೆ ದೊಡ್ಡ ಆಘಾತ ನೀಡಿದೆ. ನಾಗಮಂಗಲ ತಾಲೂಕಿನಿಂದ ಆಯ್ಕೆಯಾಗಿರುವ ಬಾಲಕೃಷ್ಣ (ನೆಲ್ಲಿಗೆರೆ ಬಾಲು) ಅವರು ಅನರ್ಹಗೊಂಡಿದ್ದಾರೆ.

ಬಾಲಕೃಷ್ಣ ನೆಲ್ಲಿಗೆರೆ ಡೇರಿ ನಿರ್ದೇಶಕರಾಗಿದ್ದರೆ, ಅವರ ಸಹೋದರ ಮುದ್ದೇಗೌಡ ಕಾರ್ಯದರ್ಶಿಯಾಗಿದ್ದಾರೆ. ಸಂಘದ ಬೈಲಾ ಪ್ರಕಾರ ಕಾರ್ಯದರ್ಶಿಯ ರಕ್ತಸಂಬಂಧಿಗಳು ಡೇರಿಯ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಲು ಅಥವಾ ಅಧ್ಯಕ್ಷರಾಗಲು ಅರ್ಹರಿರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಸನ್ನ  ದೂರು ನೀಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಸಂಘಗಳ ಕಾಯಿದೆ 1959ರ ಪ್ರಕರಣ 29ಸಿ (1)(ಎಫ್)(111) ಅಡಿಯಲ್ಲಿ ಬಾಲಕೃಷ್ಣ ಅವರ ಮನ್‍ಮುಲ್ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಯನ್ನು ರದ್ದುಗೊಳಿಸಿದ್ದಾರೆ.
ಬಾಲಕೃಷ್ಣ ಅವರ ಆಯ್ಕೆ ರದ್ದತಿಯಿಂದಾಗಿ ಅವರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ ಬೆಂಬಲಿತರ ಸಂಖ್ಯೆ 7ಕ್ಕೆ ಕುಸಿದಿದೆ. ಈ ನಡುವೆ ಜೆಡಿಎಸ್ ಬೆಂಬಲಿತ ನಿರ್ದೇಶಕ ಮದ್ದೂರಿನ ಸ್ವಾಮಿ ಬಿಜೆಪಿ ಜತೆ ಗುರುತಿಸಿಕೊಂಡಿರುವುದು ಜೆಡಿಎಸ್‍ಗೆ ದೊಡ್ಡ ತಲೆನೋವಾಗಿದೆ.

ಅಧ್ಯಕ್ಷ ಗಾದಿಯ ಪ್ರಬಲ ಆಕಾಂಕ್ಷಿಯಾಗಿರುವ ಸ್ವಾಮಿ ಅವರನ್ನು ತಮ್ಮೆಡೆಗೆ ಸೆಳೆದುಕೊಂಡು ಜೆಡಿಎಸ್‍ಗೆ ಮನ್‍ಮುಲ್ ಚುಕ್ಕಾಣಿ ತಪ್ಪಿಸಬೇಕೆಂಬುದು ಕಾಂಗ್ರೆಸ್-ಬಿಜೆಪಿ ತಂತ್ರವಾಗಿದೆ ಎನ್ನಲಾಗಿದೆ. ಅಂತೆಯೇ, ಸ್ವಾಮಿ ಈಚೆಗೆ ಮಂಡ್ಯಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಜತೆ ಕಾಣಿಸಿಕೊಂಡಿದ್ದರು. ಮನ್‍ಮುಲ್ ಗದ್ದುಗೆ ನಮ್ಮದೇ ಎಂದು ಆ ಸಂದರ್ಭ ಅಶ್ವಥನಾರಾಯಣ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಮೂವರು, ತನ್ನ ಓರ್ವ ಮತ್ತು ಸರಕಾರದ ನಾಮನಿರ್ದೇಶಿತ ಹಾಗು ಮತದಾನದ ಹಕ್ಕು ಹೊಂದಿರುವ ಮೂವರು ಅಧಿಕಾರಿಗಳನ್ನೊಳಗೊಂಡು ಮನ್‍ಮುಲ್ ಅಧ್ಯಕ್ಷಗಾದಿಗೇರಲು, ಆ ಮೂಲಕ ಜೆಡಿಎಸ್‍ಗೆ ಅಧಿಕಾರ ತಪ್ಪಿಸಲು ಬಿಜೆಪಿಯು ತಂತ್ರ ಹೆಣೆದಿದೆ ಎಂಬುದಾಗಿ ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್, ಬಿಜೆಪಿ, ನಾಮನಿರ್ದೇಶಿತ ಸೇರಿದರೆ ಕಾಂಗ್ರೆಸ್-ಬಿಜೆಪಿ ತಂತ್ರದ ಪ್ರಕಾರ ಒಟ್ಟು 5 ನಿರ್ದೇಶಕರಾಗುತ್ತಾರೆ. ಇವರ ಜತೆಗೆ ಮತದಾನದ ಹಕ್ಕು ಹೊಂದಿರುವ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಹಾಗು ಸಹಕಾರ ಇಲಾಖೆ ಜಂಟಿ ನಿರ್ದೇಶಕರ ಮತ ಸೆಳೆಯುವ ಇರಾದೆ ಇದೆ ಎನ್ನಲಾಗಿದೆ.

ಕಾಂಗ್ರೆಸ್-ಬಿಜೆಪಿ ಹೆಣೆದಿರುವ ತಂತ್ರದ ಪ್ರಕಾರ ಅವರ ಕಡೆಯ ನಿರ್ದೇಶಕರ ಸಂಖ್ಯೆ 8ಕ್ಕೇರಿದೆ. ಓರ್ವ ಸದಸ್ಯರ ಆಯ್ಕೆ ಅನೂರ್ಜಿತಗೊಂಡಿರುವುದರಿಂದ ಜೆಡಿಎಸ್ ಬೆಂಬಲಿತರ ಸಂಖ್ಯೆ 7ಕ್ಕೆ ಕುಸಿದಿದೆ. ಈ ಏಳು ಜನರ ಪೈಕಿ ಸ್ವಾಮಿ ಕೂಡ ಕಾಂಗ್ರೆಸ್-ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಮನ್‍ಮುಲ್ ಅಧ್ಯಕ್ಷಗಾದಿ ಜೆಡಿಎಸ್‍ಗೆ ಸಿಗುವುದು ಕಷ್ಟವಾಗಿದೆ.

ಜೆಡಿಎಸ್‍ಗೆ ಅಧಿಕಾರ ತಪ್ಪಿಸಲು ಬಿಜೆಪಿ ಜತೆ ತೆರೆಮರೆ ಕಾರ್ಯತಂತ್ರ ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದಾರೆನ್ನುವ ಪ್ರಸ್ತುತ ಜಿಲ್ಲೆಯ ಕಾಂಗ್ರೆಸ್‍ನ ಪ್ರಭಾವಿ ರಾಜಕಾರಣಿಯ ಪ್ಲಾನ್ ನಾಳೆ(ಸೆ.23) ಮನ್‍ಮುಲ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಯಶಸ್ವಿಯಾಗುವುದೇ ಎಂಬುದು ಕುತೂಹಲ ಮೂಡಿಸಿದೆ.

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News